ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಐಸಿಡಿಎಸ್‌ಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಮಾಡುವಂತೆ ಒತ್ತಾಯಿಸಿದರು. ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು, 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗೆ, 31 ಸಾವಿರ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಮತ್ತು ಕನಿಷ್ಠ 10 ಸಾವಿರ ಪಿಂಚಣಿ ಕೊಡಬೇಕು ಎಂದು ಆಗ್ರಹಿಸಿದರು.ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು ಎಂದರು.ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪಿನಂತೆ ಎಲ್ಲ ಅಂಗನವಾಡಿ ನೌಕರರನ್ನುಉದ್ಯೋಗಸ್ಥರೆಂದು ಪರಿಗಣಿಸಿ ಗ್ರಾಜ್ಯುಟಿ ಕಾಯ್ದೆಯನ್ನು ದೇಶದೆಲ್ಲೆಡೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ವಿದ್ಯುತ್ ರೈಲ್ವೆ ಸೇರಿದಂತೆ ಯಾವುದೇ ಸಾರ್ವಜನಿಕ ವಲಯಗಳ ಖಾಸಗೀಕರಣ ನಿಲ್ಲಬೇಕು. ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈ ಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು ಎಂದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು ಎಂದರು.ರಾಜ್ಯದಲ್ಲಿ ಕೆಲಸದ ಅವಧಿಯ ಹೆಚ್ಚಳವನ್ನು ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು. ಕೆಲಸದ ಅವಧಿ ಹೆಚ್ಚಿಸುವ ಮಹಿಳೆಯರನ್ನು ರಾತ್ರಿಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡುವುದು ಸೇರಿದಂತೆ ಎಲ್ಲ ಕಾರ್ಮಿಕ ವಿರೋಧಿ ತಿದ್ದು ಪಡಿಗಳನ್ನು ವಾಪಸ್ ಪಡೆಯಬೇಕು, ನ್ಯಾಯಯುತವಾಗಿ ಜಿಎಸ್‌ಟಿ ಪಾಲನ್ನು ರಾಜ್ಯಗಳಿಗೆ ನೀಡಬೇಕು, 6 ವರ್ಷದ ಮಕ್ಕಳು ಅಂಗನವಾಡಿ ಫಲಾನುಭವಿಗಳಾಗಿರುವುದರಿಂದ ಅವೈಜ್ಞಾನಿಕ ಕೂಸಿನ ಮನೆಯ ಅಗತ್ಯತೆ ಇಲ್ಲ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ವೆಚ್ಚ ಮತ್ತು ಎರಡು ಕಡೆ ಫಲಾನುಭವಿಗಳಾಗುತ್ತಾರೆ ಆದ್ದರಿಂದ ಕೂಸಿನ ಮನೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ. ಪೂರ್ವ ಪ್ರಾಥಮಿಕ ಶಿಕ್ಷಣ ಗರ್ಭಿಣಿ-ಬಾಣಂತಿಯರ ಆರೈಕೆ ಹೊರತು ಪಡಿಸಿ ಉಳಿದ ಕೆಲಸಗಳನ್ನು ನಿರ್ಭಂಧಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಸುಜಾತ, ಶಾಯಿದಬಾನು, ಚಿಕ್ಕತಾಯಿ, ಗುರುಲಿಂಗಮ್ಮ ವಿಶಾಲಾಕ್ಷಿ, ಜನೀಲಾ, ಲೀಲಾವತಿ, ಶಿವಬಸಮ್ಮ, ರಾಜಮ್ಮ, ಪುಷ್ಪ, ಲತಾ, ರೇವಮ್ಮ, ಅನ್ನಪೂರ್ಣ, ಪುಟ್ಟಮ್ಮ, ಶಾಂತಮ್ಮ, ಮೋಸಿಮ್ ಪಾತಿಮಾ, ಅಸಿನಾಬಾನು ಪಾರ್ವತಮ್ಮ, ತುಳಸಮ್ಮ, ಇತರರು ಭಾಗವಹಿಸಿದ್ದರು.