ಆಶಾ ಕಾರ್ಯಕರ್ತೆಯರಿಂದ ಕೊಪ್ಪಳದಲ್ಲಿ ಪ್ರತಿಭಟನೆ

| Published : Nov 13 2023, 01:16 AM IST

ಆಶಾ ಕಾರ್ಯಕರ್ತೆಯರಿಂದ ಕೊಪ್ಪಳದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಈಶ್ವರ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿ, ಪ್ರತಿಭಟನೆ ನಡೆಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಈಶ್ವರ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿ, ಪ್ರತಿಭಟನೆ ನಡೆಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಹಗಲಿರುಳು ಸೇವೆ ಸಲ್ಲಿಸುತ್ತಾರೆ. ಅವರಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನವು ಆರ್‌ಸಿಎಚ್‌ ಪೋರ್ಟಲ್‌ಗೆ ಲಿಂಕ್ ಆಗಿದೆ. ಹೀಗಾಗಿ ಅವರಿಗೆ ಸಂಪೂರ್ಣ ವೇತನ ಸಿಗುತ್ತಿಲ್ಲ. ಸಾವಿರಾರು ರುಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಮೊಬೈಲ್ ಆಧಾರಿತ ಕೆಲಸ ನೀಡುವುದನ್ನು ಕೈಬಿಡಬೇಕು. ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಲೇ ಪ್ರೋತ್ಸಾಹಧನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಪಿಎಸ್ ಆಧಾರಿತ ಫೋಟೋ ಕೊಡದೇ ಇದ್ದರೆ ವೇತನ ಇಲ್ಲ ಎನ್ನುವಂತಾಗಿದೆ. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ವೇತನ ಇಲ್ಲ. ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ ಕನಿಷ್ಠ 3 ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಬೇಕಿದೆ. ವರ್ಷವಾದರೂ ಸಭೆ ಕರಿದಿಲ್ಲ. ಆದ್ದರಿಂದ ಇಂತಹ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕಳೆದ 5-6 ವರ್ಷಗಳಿಂದ ಹಲವಾರು ಮನವಿ ಸಲ್ಲಿಸಿದಾಗ್ಯೂ ಸಮಗ್ರ ಪರಿಹಾರ ಸಿಗದಿರುವುದು ವಿಷಾದದ ಸಂಗತಿಯಾಗಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡ್ರ, ತಾಲೂಕು ಮುಖಂಡರಾದ ಜ್ಯೋತಿಲಕ್ಷ್ಮೀ ಅಯೋಧ್ಯಾ, ಶಂಕ್ರಮ್ಮ ಕುಕನೂರು, ವಿಜಯಲಕ್ಷ್ಮೀ ಆಚಾರ, ಲಾಲಬೀ, ಗೀತಾ, ಸುನೀತಾ ಹುಲಿಗಿ, ಚಂಪಾ, ದೀಪಾ, ರೇಖಾ ಹೊಸಕೇರಾ, ರಾಜೇಶ್ವರಿ, ಹುಲಿಗೆಮ್ಮ, ಲಕ್ಷ್ಮೀ, ಸಕ್ರಮ್ಮ ಮುಂತಾದ 500ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.