ಸೆ.10ರಂದು ಬಂಜಾರರಿಂದ ಪ್ರತಿಭಟನೆ, ವಿಧಾನಸೌಧ ಮುತ್ತಿಗೆ

| Published : Aug 29 2025, 01:00 AM IST

ಸೆ.10ರಂದು ಬಂಜಾರರಿಂದ ಪ್ರತಿಭಟನೆ, ವಿಧಾನಸೌಧ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಒಳಮೀಸಲಾತಿ ಹೆಸರಿನಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳ ಜೊತೆಗೆ ಇನ್ನೂ 63 ಜಾತಿಗಳನ್ನು ಸೇರಿಸಿ, ಶೇ.5 ಮೀಸಲಾತಿ ನೀಡಿ ಅನ್ಯಾಯ ಮಾಡಲಾಗಿದೆ. ಈ ಕ್ರಮ ಖಂಡಿಸಿ ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಂಜಾರ ಗುರಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಸಿದ್ದಾರೆ.

- ಒಳಮೀಸಲಾತಿ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗೆ ಘೋರ ಅನ್ಯಾಯ: ಸೇವಾಲಾಲ್ ಶ್ರೀ ಸಮಾಧಾನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಒಳಮೀಸಲಾತಿ ಹೆಸರಿನಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳ ಜೊತೆಗೆ ಇನ್ನೂ 63 ಜಾತಿಗಳನ್ನು ಸೇರಿಸಿ, ಶೇ.5 ಮೀಸಲಾತಿ ನೀಡಿ ಅನ್ಯಾಯ ಮಾಡಲಾಗಿದೆ. ಈ ಕ್ರಮ ಖಂಡಿಸಿ ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಂಜಾರ ಗುರಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ನ್ಯಾ.ಸದಾಶಿವ ಆಯೋಗ ಆಧಾರಿತ ಒಳಮೀಸಲಾತಿಯನ್ನು ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ.04.5 ಘೋಷಿಸಿತ್ತು. ಆದರೆ, ಈಗಿನ ಸರ್ಕಾರ 63 ಸಮುದಾಯಗಳನ್ನು ಪಟ್ಟಿ ಮಾಡಿ, ಶೇ.05 ಒಳ ಮೀಸಲಾತಿ ಘೋಷಿಸಿದೆ. ಇದಕ್ಕಿಂದ ಘೋರ ಅನ್ಯಾಯ ಬೇರೊಂದಿಲ್ಲ. ನಮ್ಮ ಸಮುದಾಯಗಳಿಗೆ ಅನ್ಯಾಯ ಮಾಡುವ ಪಕ್ಷ, ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದರು.

ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ತರಾತುರಿಯಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಒಳ ಮೀಸಲಾತಿ ವರ್ಗೀಕರಣಕ್ಕೆ ಅವಕಾಶವೇ ಇಲ್ಲ. ಇಂದಿಗೂ ಬಂಜಾರ ಸಮುದಾಯದ ಶೇ.70 ಜನರಿಗೆ ಸ್ವಂತ ಸೂರು, ನೆಲೆ ಇಲ್ಲ. ವಲಸೆ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರವು ಲಂಬಾಣಿ, ಭೋವಿ, ಕೊರಚ, ಕೊರಮ ಜನಾಂಗಕ್ಕೆ ಶೇ.4.5 ಮೀಸಲಾತಿ ನೀಡಿದಾಗ ಸಮಾಜದ ಮುಖಂಡರೇ ದಾರಿ ತಪ್ಪಿಸಿದ್ದರು. ಈಗ ಅದೇ ಜನರ ಮತಗಳಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ನ್ಯಾ.ನಾಗಮೋಹನ ದಾಸ್ ಆಯೋಗದ ವರದಿಯಲ್ಲಿ ಸುಮಾರು 25 ಲಕ್ಷ ಜನಸಂಖ್ಯೆಯ ಲಂಬಾಣಿಗರನ್ನು ಕೇವಲ 11 ಲಕ್ಷವೆಂದು ತೋರಿಸಿದ್ದು ಕರಾಳ ವರದಿಯಾಗಿದೆ. ಮಲೆನಾಡು, ಕಾಫಿ ಸೀಮೆ, ಬೆಂಗಳೂರು, ಮುಂಬೈ ಸೇರಿದಂತೆ ದೊಡ್ಡ ನಗರ, ಅನ್ಯ ರಾಜ್ಯಗಳಿಗೆ ಗುಳೆ ಹೋಗುವ, ದಾವಣಗೆರೆಯಂತಹ ನಗರಗಳಲ್ಲಿ ವಾಸಿಸುವ ಲಂಬಾಣಿಗರನ್ನು ಆಯೋಗ ಲೆಕ್ಕಕ್ಕೇ ಹಿಡಿದಿಲ್ಲ ಎಂದು ಟೀಕಿಸಿದರು.

ರಾಜ್ಯವ್ಯಾಪಿ ಆ.29ರಂದು ರಾಜ್ಯ ಸರ್ಕಾರ, ನ್ಯಾ.ನಾಗಮೋಹನ ದಾಸ್ ಆಯೋಗದ ವರದಿ ವಿರುದ್ಧ ಲಂಬಾಣಿ ಸಮುದಾಯ ಸುದ್ದಿಗೋಷ್ಠಿ ಮಾಡುವ ಮೂಲಕ ರಾಜ್ಯಾ ದ್ಯಂತ ಮೊದಲ ಹಂತದಲ್ಲಿ ಹೋರಾಟ ನಡೆಸಲಿದೆ. ಸೆ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ, ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ. ಸೆ.10 ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಹೇಳಿದರು.

ಸಮಾಜದ ಮುಖಂಡರಾದ ಅನಿಲಕುಮಾರ ನಾಯ್ಕ, ಮಲ್ಲೇಶ ನಾಯ್ಕ, ಚಿನ್ನಸಮುದ್ರ ಶೇಖರ ನಾಯ್ಕ, ಆರ್.ಎಲ್.ಶಿವಪ್ರಕಾಶ, ಮಂಜಾನಾಯ್ಕ, ಮಂಜುನಾಥ ನಾಯ್ಕ, ತಾರೇಶ ನಾಯ್ಕ, ರಾಜಾನಾಯ್ಕ, ಉಮೇಶ ನಾಯ್ಕ, ಹೇಮಾನಾಯ್ಕ ಇತರರು ಇದ್ದರು.

- - -

(ಬಾಕ್ಸ್‌) * ಮೈಸೂರು ಅರಸರಿಂದ ನಮಗೆ ಮೀಸಲಾತಿ ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಕಾಂಗ್ರೆಸ್ ಸರ್ಕಾರವಲ್ಲ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಮಿಲ್ಲರ್ ಆಯೋಗ ರಚಿಸಿ, 1918ರಲ್ಲೇ ಎಸ್‌ಸಿಗೆ ನಮ್ಮ ಸಮುದಾಯವನ್ನು ಸೇರಿಸಿದ್ದರು. ಬಿಜೆಪಿ ಹಠಾವೋ ಕಾಂಗ್ರೆಸ್ ಬಚಾವೋ ಅಂತಾ ನಮ್ಮ ಸಮುದಾಯದವರ ಕೂಗಿಗೆ ಓಗೊಟ್ಟಿದ್ದರಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 42ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 2-3 ಸಾವಿರ ಮತಗಳಿಂದ ಸೋಲಬೇಕಾಯಿತು. 6 ದಶಕ ಕಳೆದರೂ ಲಂಬಾಣಿ ಸಮುದಾಯಕ್ಕೆ ಕಾಂಗ್ರೆಸ್ ನ್ಯಾಯ ಕೊಟ್ಟಿಲ್ಲ.

- ಎಂ.ಬಸವರಾಜ ನಾಯ್ಕ, ಮಾಜಿ ಅಧ್ಯಕ್ಷ, ತಾಂಡಾ ಅಭಿವೃದ್ಧಿ ನಿಗಮ.

- - -

(ಕೋಟ್‌) ನಮ್ಮ ನಾಲ್ಕೂ ಸಮುದಾಯಗಳಿಗೆ ಆದ ಅನ್ಯಾಯವನ್ನು ಖಂಡಿಸಿ ಸೆ.6ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆ ಅಂಬೇಡ್ಕರ್ ವೃತ್ತದಿಂದ ಎಸಿ ಕಚೇರಿವರೆಗೆ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಿ, ಸೆ.10ರಂದು ಬೆಂಗಳೂರಿನಲ್ಲಿ ಪ್ರತಿಭಟಿಸಲಾಗುವುದು. ವಿಧಾನಸೌಧಕ್ಕೂ ಮುತ್ತಿಗೆ ಹಾಕಲಿದ್ದೇವೆ.

- ಶ್ರೀ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಬಂಜಾರ ಗುರಪೀಠ

- - -

-28ಕೆಡಿವಿಜಿ1:

ದಾವಣಗೆರೆಯಲ್ಲಿ ಗುರುವಾರ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.