ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ರಾಜ್ಯದಲ್ಲಿ ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಪಟೇಲ್‌ನಗರದ ಬಿಜೆಪಿ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ತಹಸೀಲ್ದಾರ್ ಕಚೇರಿ ಎದುರು ಬೃಹತ್ ರ್‍ಯಾಲಿಯಾಗಿ ಮಾರ್ಪಟ್ಟಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆ ಮುಗಿದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿತು. ಈಗ ಮತ್ತೆ ಹಾಲಿನ ದರ ಅರ್ಧ ಲೀಟರ್‌ಗೆ ₹2 ಮತ್ತು ಲೀಟರ್‌ಗೆ ₹4 ಏರಿಕೆ ಮಾಡಲಾಗಿದೆ. ಇದರಿಂದ ಬಡ, ಮಧ್ಯಮ ವರ್ಗದವರ ಸ್ಥಿತಿ ಚಿಂತಾಜನಕವಾಗಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿದೆ. ಈಗಾಗಲೇ ಈ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ ಎಂದು ದೂರಿದರು.
ರಾಜ್ಯದ ಜನರು ಬೆಲೆ ಏರಿಕೆಯಿಂದ ದೈನಂದಿನ ಬದುಕು ನಡೆಸಲು ಪರಿತಪಿಸುವಂತಾಗಿದ್ದು, ಈಗಾಗಲೇ ಹಾಲಿನ ದರ ಏರಿಕೆಯಿಂದ ಹೋಟೆಲ್‌ಗಳಲ್ಲಿ ಕಾಫಿ, ಟೀ ದರವೂ ಜಾಸ್ತಿಯಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಾಣಿಕೆ, ತರಕಾರಿ ದರವೂ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನೂ ಬಸ್ ಟಿಕೆಟ್ ದರ ಕೂಡ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ. ಈ ಸರ್ಕಾರ ಬರೀ ಬೆಲೆ ಏರಿಕೆ ಸರ್ಕಾರವಾಗಿದೆ ಎಂದರು. ತಹಸೀಲ್ದಾರ್ ವಿಶ್ವಜಿತ್ ಮೆಹತಾ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರೇವಣ್ಣ, ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಕೆ.ಎಸ್. ರಾಘವೇಂದ್ರ, ಶಂಕರ್ ಮೇಟಿ, ಬೆಣಕಲ್ಲ ಪ್ರಕಾಶ್, ನಾಗರಾಜ್, ಚಂದ್ರು, ದೇವಲಾಪುರ, ಹೊನ್ನರಪ್ಪ, ದೇವರಮನಿ ವೆಂಕಟೇಶ್ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))