ಸಾರಾಂಶ
ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಮತ್ತು ಎಐಟಿಯುಸಿ ವತಿಯಿಂದ ಪಟ್ಟಣದ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಶನಿವಾರ ಮನವಿ ಸಲ್ಲಿಸಿದರು.
ಹೊಸದುರ್ಗ: ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಮತ್ತು ಎಐಟಿಯುಸಿ ವತಿಯಿಂದ ಪಟ್ಟಣದ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಶನಿವಾರ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಟಿಯುಸಿ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಳೆದ 21 ವರ್ಷಗಳಿಂದಲೂ ಅಕ್ಷರ ದಾಸೋಹದಲ್ಲಿ ಅಪಾರ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕನಿಷ್ಟ ವೇತನ ₹21 ಸಾವಿರ, ಕೆಲಸದ ಭದ್ರತೆ, ತಮಿಳುನಾಡು ಮಾದರಿಯಲ್ಲಿ ವಿವಿಧ ಸೌಲಭ್ಯಗಳು, ಮಾಸಿಕ ₹3000 ನಿವೃತ್ತಿ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿ ವರ್ಷ ಒಂದು ಸಮವಸ್ತ್ರ ನೀಡಬೇಕು. ದಸರಾ ರಜೆ, ಬೇಸಿಗೆ ರಜೆ ಸಂಬಳ ನೀಡಬೇಕು. ಬಿಸಿಯೂಟ ತಯಾರಕರು ಮರಣ ಹೊಂದಿದ್ದಲ್ಲಿ ₹2 ಲಕ್ಷ ಪರಿಹಾರ, ಅಂತ್ಯಕ್ರಿಯೆಗೆ ₹20 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎನ್.ಸಿ ಶಿವಮ್ಮ, ಕಾರ್ಯದರ್ಶಿ ವಸಂತಬಾಯಿ ಸೇರಿದಂತೆ ಬಿಸಿಯೂಟ ಮುಖ್ಯ ಅಡುಗೆಯವರು ಮತ್ತು ಸಹಾಯಕಿಯರಿದ್ದರು.