ತಮಿಳುನಾಡಿನಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷರ ಹತ್ಯೆ ಖಂಡಿಸಿ ಕಾರ್ಯಕರ್ತರಿಂದ ಪ್ರತಿಭಟನೆ

| Published : Jul 16 2024, 12:31 AM IST

ಸಾರಾಂಶ

ತಮಿಳುನಾಡಿನ ಬಿಎಸ್ಪಿ ರಾಜ್ಯಾಧ್ಯಕ್ಷ ಕೆ.ಆರ್ಮಸ್ಟ್ರಾಂಗ್ ಅವರನ್ನು ಅವರ ಮನೆ ಎದುರೇ ಹತ್ಯೆ ಮಾಡಿರುವುದು ಖಂಡನೀಯ. ಉದ್ದೇಶ ಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ. ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೇ ಪ್ರಕರಣ ಹಿಂದೆ ಡಿ.ಎಂಕೆ ಸರ್ಕಾರದ ಕೈವಾಡ ಇದೆ ಎಂದಾಗುತ್ತದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಮಿಳುನಾಡು ಬಹುಜನ ಸಮಾಜಪಾರ್ಟಿ ರಾಜ್ಯಾಧ್ಯಕ್ಷ ಕೆ.ಆರ್ಮಸ್ಟ್ರಾಂಗ್ ಹತ್ಯೆ ಖಂಡಿಸಿ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ತಾಲೂಕು ಆಡಳಿತದ ಮೂಲಕ ಮನವಿ ಸಲ್ಲಿಸಿದರು.

ಬಿಎಸ್ಪಿ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ ಮಾತನಾಡಿ, ತಮಿಳುನಾಡಿನ ಬಿಎಸ್ಪಿ ರಾಜ್ಯಾಧ್ಯಕ್ಷ ಕೆ.ಆರ್ಮಸ್ಟ್ರಾಂಗ್ ಅವರನ್ನು ಅವರ ಮನೆ ಎದುರೇ ಹತ್ಯೆ ಮಾಡಿರುವುದು ಖಂಡನೀಯ. ಉದ್ದೇಶ ಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ. ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೇ ಪ್ರಕರಣ ಹಿಂದೆ ಡಿ.ಎಂಕೆ ಸರ್ಕಾರದ ಕೈವಾಡ ಇದೆ ಎಂದಾಗುತ್ತದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಎಸ್ಸಿ,ಎಸ್ಟಿ, ಟಿಎಸ್‌ಪಿಯ 25 ಸಾವಿರ ಕೋಟಿಗಿಂತ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ. ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣವನ್ನು ಸಮುದಾಯದ ಕಲ್ಯಾಣ ಅಭಿವೃದ್ಧಿಗೆ ಬಳಸುವ ಬದಲು ಅನ್ಯಕಾರ್ಯಕ್ಕೆ ಬಳಸುವುದರ ಮೂಲಕ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮಿಕಿ ಅಭಿವೃದ್ಧಿ ನಿಗಮದ ಕೊಟ್ಯಂತರ ರು. ಹಣವನ್ನು ಕೂಡ ಚುನಾವಣೆಗೆ ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವ ಶಾಸಕರು ಎಸ್‌ಸಿ, ಎಸ್‌ಟಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ಸಮುದಾಯದ ಹೋರಾಟದ ಜೊತೆಗೆ ಕೈಜೋಡಿಸಬೇಕೆಂದು ಒತ್ತಾಯಿಸಿದರು.

ಕಳೆದ ವಿಧಾನಸಭಾ ಚುನಾವಣಾ ಮುನ್ನಾ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಬ್ಯಾಕ್‌ಲಾಗ್ ಹುದ್ದೆಯನ್ನು ಭರ್ತಿ ಮಾಡುತ್ತೇವೆಂದು ಭರವಸೆ ನೀಡಿದ್ದರು. ಸರ್ಕಾರ ರಚನೆಗೊಂಡು ಒಂದುವರೆ ವರ್ಷ ಕಳೆಯುತ್ತಿದ್ದರೂ ಕೂಡ ಬ್ಯಾಕ್‌ಲ್ಯಾಗ್ ಹುದ್ದೆ ಭರ್ತಿಮಾಡಿಲ್ಲ ಎಂದು ದೂರಿದರು.

ಎಸ್‌ಸಿಎಸ್‌ಟಿ ಸಮುದಾಯದ ಸಾವಿರಾರು ಯುವಕರು ಪದವಿ ಪಡೆದು ನಿರುದ್ಯೋಗಿಗಳಾಗಿದ್ದಾರೆ. ಕೂಡಲೇ ಹುದ್ದೆ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಶಿರಸ್ತೇದಾರ್ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಎಸ್‌ಪಿ ಮುಖಂಡರಾದ ವೀರಭದ್ರಯ್ಯ, ನಂಜುಂಡಸ್ವಾಮಿ, ಉಮೇಶ್ ಮೌರ್ಯ, ವೆಂಕಟೇಶ್, ಸಿದ್ದಯ್ಯ, ಗೊವಿಂದರಾಜ್ ಸೇರಿದಂತೆ ಇತರರು ಇದ್ದರು.