ಸಾರಾಂಶ
ಹುಬ್ಬಳ್ಳಿ:
ನೇರ ವೇತನ ಪಾವತಿ ಅಡಿ ನೇಮಿಸಿಕೊಳ್ಳಬೇಕು. ಖಾಲಿ ಉಳಿದಿರುವ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಪಾಲಿಕೆ ಎದುರು ಪೌರ ಕಾರ್ಮಿಕರು ನಡೆಸುತ್ತಿರುವ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಬೆಳಗ್ಗೆ ತಲೆ ಮೇಲೆ ಕಲ್ಲು ಹೊತ್ತು, ಬೂಟ್ ಪಾಲೀಶ್ ಮಾಡಿ ಪ್ರತಿಭಟನೆ ನಡೆಸಿದರು.ಈ ನಡುವೆ ಮುಷ್ಕರ ನಿರತ ಮಹಿಳಾ ಪೌರ ಕಾರ್ಮಿಕರಾದ ರೇಣುಕಾ ಸಾಂಬ್ರಾಣಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೌರಕಾರ್ಮಿಕರ ಸಂಘದ ಹಕ್ಕೊತ್ತಾಯಗಳ ಹೋರಾಟದ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವ ಪಾಲಿಕೆ ಆಯುಕ್ತರ ಹೇಳಿಕೆಯನ್ನು ಪ್ರತಿಭಟನಾಕಾರರು ಖಂಡಿಸಿದರು. ಕಾಯಂಗೊಳ್ಳುವ ಅರ್ಹತೆ ಹೊಂದಿದ 200 ಪೌರಕಾರ್ಮಿಕರು ಮೃತಪಟ್ಟಿದ್ದಾರೆ. 120ಕ್ಕೂ ಹೆಚ್ಚು ಜನ 60 ವರ್ಷ ಮೀರಿ ನಿವೃತ್ತಿ ಹೊಂದಿದ್ದಾರೆ. ಅವರಿಗೆ ಮತ್ತು ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಪಾಲಿಕೆ ಆಯುಕ್ತರ ನಿರ್ಲಕ್ಷ್ಯದಿಂದ 320 ಕುಟುಂಬಗಳು ಬೀದಿಪಾಲು ಆಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾರದಲ್ಲಿ ಪೌರ ಕಾರ್ಮಿಕರಿಗೆ ಒಂದು ದಿನದ ಪೂರ್ತಿ ರಜೆ ನೀಡುವ ಸರ್ಕಾರದ ಆದೇಶ ಈ ವರೆಗೂ ಅನುಷ್ಠಾನಗೊಳಿಸಿಲ್ಲ. ನ್ಯಾಯಯುತ ಹಕ್ಕುಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಸ್ವಚ್ಛತಾ ಕೆಲಸ ಸ್ಥಗಿತಗೋಳಿಸಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಬಸಪ್ಪ ಮಾದರ, ಗಂಗಮ್ಮ ಸಿದ್ರಾಮಪುರ, ಲಕ್ಷ್ಮಿ ವಾಲಿ, ದೊಡ್ಡಪ್ಪ ವಂದಾಲ, ಫಕ್ಕಿರವ್ವ ಕಡಕೋಳ, ಪರಶುರಾಮ ಚಿಕ್ಕಲಗಾರ, ಅನ್ನಪೂರ್ಣ ಕೋಟಬಾಗಿ, ಭಾಗ್ಯ ಖಾನಾಪುರ, ರಾಧಾ ಬಾಗಲಾಡ, ಗುರು ಮದರಿ, ಸೋಮನಾಥ ಟಗರಗುಂಟಿ, ರಾಜು ನಾಗರಾಳ, ಮೈಲಾರಿ ದೊಡ್ಡಮನಿ, ಅರ್ಜುನ ನಾಗನೂರ, ದೇವಪ್ಪ ಗೆಜ್ಜೆಳ್ಳಿ, ಅಶೋಕ ಮೊರಬದ ಇತರರು ಇದ್ದರು.