ಸಾರಾಂಶ
ಕಾಂಗ್ರೆಸ್ ಕಾರ್ಯಕರ್ತರು ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ನೇತೃತ್ವ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ರದ್ದು ಪಡಿಸುವಂತೆ ತಮ್ಮದೇ ಸರ್ಕಾರವನ್ನು ಒತ್ತಾಯಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.ಈ ಸಂದರ್ಭ ಸೊರಕೆ ಅವರು ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಈ ಟೋಲ್ ಗೇಟ್ ಪ್ರಕ್ರಿಯೆ ಆರಂಭವಾಗಿದೆ. ಮೊದಲು ಅದನ್ನು ಬೆಳ್ಮಣ್ ನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು, ಅಲ್ಲಿನ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರ್ಕಾರ ಅದನ್ನು ಕಂಚಿನಡ್ಕಕ್ಕೆ ರವಾನಿಸಿದೆ. ಈಗ ಇಲ್ಲಿಂದಲೇ ಓಡಿಸುವ ಉದ್ದೇಶಕ್ಕಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಲ್ಲಿ ಟೋಲ್ ಇರುವಾಗ, ಅಲ್ಲಿಂದ ಕೇವಲ 3 ಕಿ.ಮೀ. ಅಂತರದ ರಾಜ್ಯ ಹೆದ್ದಾರಿಯಲ್ಲಿ ಇನ್ನೊಂದು ಟೋಲ್ ಸ್ಥಾಪಿಸಿ ಜನರನ್ನು ಸುಲಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಖಂಡಿಸಿ ಈ ಹೋರಾಟಕ್ಕೆ ಚಾಲನೆ ನೀಡಲಾಗಿದ್ದು, ನಾಳೆ (ಗುರುವಾರ) ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.ಉಡುಪಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶೇಖರ ಹೆಜ್ಮಾಡಿ, ಬೆಳಪು ದೇವೀಪ್ರಸಾದ್ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ನಾಯಕರಾದ ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್, ಶಾಂತಲತಾ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೈ. ಸುಕುಮಾರ್, ಕರುಣಾಕರ ಪೂಜಾರಿ ಪಡುಬಿದ್ರಿ, ನವೀನ್ ಚಂದ್ರ ಜೆ. ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಶಿವಾಜಿ ಸುವರ್ಣ, ಶರ್ಪುದ್ದೀನ್ ಶೇಖ್, ದೀಪಕ್ ಎರ್ಮಾಳು, ಗುಲಾಂ ಅಹ್ಮದ್, ಆಶಾ ಕಟಪಾಡಿ, ಸುಲೋಚನಾ ಬಂಗೇರಾ, ತಸ್ಲೀನ್ ಅರ್ಹಾ, ಜ್ಯೋತಿ ಮೆನನ್ ಮೊದಲಾದವರು ಉಪಸ್ಥಿತರಿದ್ದರು.