ಸಾರಾಂಶ
ರಾಮನಗರ: ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯಯಾತ್ರೆಗೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟು ಐಜೂರು ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ದೇವಾಲಯ ಪ್ರವೇಶಿಸದಂತೆ ಬಿಜೆಪಿ ಕಾರ್ಯಕರ್ತರು ತಡೆದಿರುವುದು ಸರಿಯಲ್ಲ. ಈ ಘಟನೆ ಹಿಂದೆ ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ಕೈವಾಡವಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕಾಗಿ ಭಾರತವನ್ನು ವಿಭಜನೆ ಮಾಡುತ್ತಿದೆ. ಆದರೆ, ಕಾಂಗ್ರೆಸ್ ದೇಶದಲ್ಲಿ ಐಕ್ಯತೆ ಮೂಡಿಸುವ ಕೆಲಸ ಮಾಡುತ್ತಿದೆ. ದೇಶದ ಸಂವಿಧಾನವನ್ನು ಉಳಿಸಿಕೊಂಡು ಇಲ್ಲಿವರೆಗೆ ಬಂದಿದ್ದೇವೆ. ದೇಶದ ಜನರ ಸಮಸ್ಯೆಗೆ ಕೇಂದ್ರ ಸರ್ಕಾರ ಕಣ್ಣಿದ್ದೂ ಕುರುಡಾಗಿದೆ ಎಂದು ಟೀಕಿಸಿದರು.ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ, ಮಣಿಪುರ ಹೊತ್ತಿ ಉರಿಯುವಾಗ ಬಿಜೆಪಿ ನಾಯಕರು ಹೋಗಲಿಲ್ಲ. ಅಸ್ಸಾಂ ಮುಖ್ಯಮಂತ್ರಿ ಕಾಂಗ್ರೆಸ್‌ನಲ್ಲಿದ್ದು, ಅಧಿಕಾರಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಅಸ್ಸಾಂನಲ್ಲಿ ನಡೆದ ಘಟನೆಯಿಂದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈಗ ರಾಹುಲ್ ಗಾಂಧಿ ಭೇಟಿಯಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲ ನೋಡಿ ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂದು ಹೇಳಿದರು.
ಈ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲು ಬಿಜೆಪಿ ವಾಮಮಾರ್ಗದಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.ರಾಹುಲ್ ಗಾಂಧಿಯವರ ಮೇಲೆ ಕಲ್ಲು ತೂರಾಟ, ದೇಗುಲ ಪ್ರವೇಶಿಸಲು ಅವಕಾಶ ನೀಡದಿರುವುದರ ಹಿಂದೆ ಬಿಜೆಪಿಯ ಕೈವಾಡ ಇರುವುದು ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಎದೆಗುಂದ ಬೇಕಿಲ್ಲ. ಅವರ ಬೆನ್ನ ಹಿಂದೆ ಕೋಟ್ಯಂತರ ಕಾರ್ಯಕರ್ತರು ಇದ್ದಾರೆ ಎಂದು ಹೇಳಿದರು.
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ ಮಾತನಾಡಿ, ಭಾರತ್ ಜೋಡೋ ಯಾತ್ರೆಯಂತೆ ಈ ಯಾತ್ರೆಯೂ ಎಲ್ಲಿ ಯಶಸ್ವಿಯಾಗುತ್ತದೆಯೋ ಎಂಬ ಆತಂಕ ಬಿಜೆಪಿಯವರಿಗೆ ಕಾಡುತ್ತಿದೆ. ಈ ಕಾರಣದಿಂದಲೇ ಅಸ್ಸಾಂ ಸರ್ಕಾರದ ಮೇಲೆ ಯಾತ್ರೆಗೆ ತಡೆಯೊಡ್ಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದು ಪ್ರಧಾನಿ ಮೋದಿಯವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಈ ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಶಾಶ್ವತವೇ ಹೊರತು ಮೋದಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಮುಖಂಡ ಶಿವಕುಮಾರಸ್ವಾಮಿ ಮಾತನಾಡಿ, ಭಾರತ್ ಜೋಡೊ ನ್ಯಾಯ ಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷ
ದೇಶದ ಆರ್ಥಿಕತೆ, ಸಾಮಾಜಿಕ ವಿಚಾರ, ಬಡತನ, ನಿರುದ್ಯೋಗ, ಬೆಲೆ ಏರಿಕೆ, ಮಹಿಳೆಯರ ರಕ್ಷಣೆ ಮತ್ತಿತರ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಲು ಮುಂದಾಗಿದೆ. ಇದರಿಂದ ಹೆದರಿರುವ ಬಿಜೆಪಿ ಯಾತ್ರೆಯನ್ನು ಅಡ್ಡಿ ಪಡಿಸುವ ಕೆಲಸಕ್ಕೆ ಮುಂದಾಗಿದೆ. ಈ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್ ಮಾತನಾಡಿ, ದೇಶದ ನ್ಯಾಯಕ್ಕೋಸ್ಕರ ರಾಹುಲ್ ಗಾಂಧಿ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ಅಡ್ಡಿ ಪಡಿಸುತ್ತಿದೆ. ಬಿಜೆಪಿ ಸರ್ಕಾರ ತನ್ನ ಹಿಟ್ಲರ್ ಆಡಳಿತ ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ರಮೇಶ್, ಎ.ಬಿ.ಚೇತನ್ ಕುಮಾರ್, ಪುಟ್ಟರಾಜು, ನರಸಿಂಹಯ್ಯ, ರಾಮಣ್ಣ, ಅನಿಲ್ ಜೋಗಿಂದರ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಮಾಜಿ ಅಧ್ಯಕ್ಷೆ ಪಾರ್ವತಮ್ಮ, ನಾಗಮ್ಮ ಮತ್ತಿತರರು ಭಾಗವಹಿಸಿದ್ದರು.23ಕೆಆರ್ ಎಂಎನ್ 1.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.