ಕನ್ನಡಪ್ರಭ ವಾರ್ತೆ ದಾಂಡೇಲಿ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಲೋಕೋಪಯೋಗಿ ಗುತ್ತಿಗೆದಾರರ ಸಮಾವೇಶ ನಡೆಯುತ್ತಿದ್ದು, ಅಲ್ಲಿ ದಾಂಡೇಲಿ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಸದಸ್ಯರು ಬೇಡಿಕೆ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.ದಾಂಡೇಲಿಯ ಕೆನರಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್.ಶಶಿಧರನ್, ಸಂಘಟನಾ ಕಾರ್ಯದರ್ಶಿ ಆರ್.ಸಿ. ದೇವಾನಂದ, ಖಾಜಾಂಚಿ ಸುಧಾಕರ ರೆಡ್ಡಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಪಾವತಿಯಾಗದೆ ಉಳಿದಿರುವ ಬಿಲ್‌ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಈ ಸಂದರ್ಭ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಗುತ್ತಿಗೆದಾರರ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಮ್ಮ ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿ ಬಾಕಿ ಬಿಲ್‌ಗಳು ಪಾವತಿಯಾಗದೇ ಉಳಿದಿದ್ದು, ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗುತ್ತಿಗೆದಾರರು ಬ್ಯಾಂಕ್ ಸಾಲ ಮಾಡಿಕೊಂಡು ಕಾಮಗಾರಿಗಳನ್ನು ಮಾಡಿದ್ದು ಬ್ಯಾಂಕಿನ ಬಡ್ಡಿ ತುಂಬಲಾಗದೇ ತೀವ್ರ ಆರ್ಥಿಕ ತೊಂದರೆಯಲ್ಲಿದ್ದಾರೆ. ಆದ್ದರಿಂದ ಕೂಡಲೇ ಬಾಕಿ ಇರುವ ಗುತ್ತಿಗೆದಾರರ ಬಿಲ್ ಹಣ ಪಾವತಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೆನರಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಎಲ್. ಲಮಾಣಿ, ಜಂಟಿ ಕಾರ್ಯದರ್ಶಿ ಎಸ್.ಎನ್. ಪಡುಕೋಣೆ, ಸದಸ್ಯರಾದ ಎಸ್.ಬಿ. ಮುರ್ಡಿ, ಎಂ.ಸುಬ್ರಮಣಿ, ಪ್ರದೀಪ ಗವಾಸ, ಅರವಿಂದ ಪಾಟಂಕರ, ಅವಿನಾಶ ಘೋಡಕೆ, ಸಿ.ವಿ. ಖೋಕನೆ, ಬಾಬು ಗೌಡ, ಉಳವಪ್ಪ ಹಿತ್ತಲಮನಿ, ಮಹಾಂತೇಶ ಗುತ್ತನಾರ, ಅಶೋಕ, ಧೀರಜ್ ಪಡಕೋಣೆ ಮೊದಲಾದವರು ಪ್ರತಿಭಟನೆಯಲ್ಲಿದ್ದರು.