ಆವರಗೆರೆ ದನವಿನ ಓಣಿ ಗೋಮಾಳದ ನಿವೇಶನರಹಿತ ಬಡವರ ಗುಡಿಸಲು ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ, ಪರ್ಯಾಯ ವಸತಿ ಕಲ್ಪಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪಾದಯಾತ್ರೆ ಮೂಲಕ ಪ್ರತಿಭಟಿಸಲಾಯಿತು.

- ಸೂಕ್ತ ಪರಿಹಾರ, ಪರ್ಯಾಯ ವ್ಯವಸ್ಥೆಗೆ ಡಿಎಸ್‌ಎಸ್‌ ಒತ್ತಾಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆವರಗೆರೆ ದನವಿನ ಓಣಿ ಗೋಮಾಳದ ನಿವೇಶನರಹಿತ ಬಡವರ ಗುಡಿಸಲು ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ, ಪರ್ಯಾಯ ವಸತಿ ಕಲ್ಪಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪಾದಯಾತ್ರೆ ಮೂಲಕ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ದಿವಂಗತ ಕಾನ್ಷಿರಾಂ ಅವರ 20ನೇ ಮಹಾ ಪರಿನಿರ್ವಾಣ ದಿನ ಅಂಗವಾಗಿ ಪಾದಯಾತ್ರೆ ಮೂಲಕ ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಚ್.ಮಲ್ಲೇಶ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಸಂತ್ರಸ್ತರು ಸಾಗಿ, ಅಲ್ಲಿಂದ ಹಳೇ ಕೋರ್ಟ್ ರಸ್ತೆ, ಹಳೇ ಪಿ.ಬಿ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಎಚ್.ಮಲ್ಲೇಶ, 4.3.2022ರಂದು ಪಾಲಿಕೆ ವ್ಯಾಪ್ತಿಯ ಆವರಗೆರೆ ಗ್ರಾಮದ ದನವಿನ ಓಣಿ ಗೋಮಾಳದಲ್ಲಿದ್ದ ಸುಮಾರು 250-300 ಬಡ ಕುಟುಂಬಗಳ ವಸತಿ ಗುಡಿಸಲುಗಳನ್ನು ಜಿಲ್ಲಾಡಳಿತ ಯಾವುದೇ ಪೂರ್ವ ಮಾಹಿತಿ ನೀಡದೇ ತೆರವುಗೊಳಿಸಿತ್ತು. ಪೋಲಿಸ್ ಬಲ ಪ್ರಯೋಗದ ಕಾರ್ಯಾಚರಣೆಯಿಂದ ನೂರಾರು ಬಡ ಕುಟುಂಬ ಬೀದಿಗೆ ಬಿದ್ದಿದ್ದವು. ಅಲ್ಲದೇ, ಬಡ ನಿವಾಸಿಗಳ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು ಎಂದರು.

ವಸತಿ ಗುಡಿಸಲುಗಳ ತೆರವು ಕಾರ್ಯಾಚರಣೆಯಲ್ಲಿ ಧ್ವಂಸಗೊಂಡ ಮತ್ತು ವಶಪಡಿಸಿಕೊಂಡ ಸಾಮಗ್ರಿಗಳಿಗೆ ಸೂಕ್ತ ಪರಿಹಾರವಾಗಲಿ ಅಥವಾ ಪರ್ಯಾಯ ವಸತಿ ಸೌಕರ್ಯವನ್ನಾಗಲಿ ಇದುವರೆಗೂ ಒದಗಿಸಿಲ್ಲ. ತೆರವುಗೊಳಿಸಲಾದ ಸಂತ್ರಸ್ತ ಬಡ ಕುಟುಂಬಗಳಿಗೆ ಸೂಕ್ತ ಹಾಗೂ ವಿಶೇಷ ನಷ್ಟ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕು. ದಾವಣಗೆರೆ ಪಾಲಿಕೆ, ತಾಲೂಕು ಕಚೇರಿ, ಪೊಲೀಸ್ ಇಲಾಖೆ ಮಾಹಿತಿಯಂತೆ ಗುರುತಿಸಲಾದ 250-300 ಸಂತ್ರಸ್ತ ಕುಟುಂಬಕ್ಕೆ ತಕ್ಷಣ ವಸತಿ ನಿವೇಶನ ಒದಗಿಸಲಿ. ಸರ್ಕಾರದ ಘೋಷಣೆಯಂತೆ ಅವರಗೆರೆ ವಸತಿ ನಿವೇಶನ ಸಂತ್ರಸ್ತರಿಗೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲಿ ಎಂದು ಒತ್ತಾಯಿಸಿದರು.

ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಡಿ.ಹನುಮಂತಪ್ಪ, ಸಿ.ಬಸವರಾಜಪ್ಪ, ಎಚ್.ಸಿ.ಮಲ್ಲಪ್ಪ, ಡಿ.ಸಮಾದೆಪ್ಪ ಶಾಮನೂರು, ಜಿ.ಎಸ್. ಲೋಕೇಶ ಹಾಲೇಕಲ್ಲು, ಎಂ.ಮಹಾಂತೇಶ ನವಿಲೆಹಾಳ್, ಎಚ್.ಎಸ್. ಚನ್ನಬಸಪ್ಪ, ಜೆ.ಡಿ. ಕೃಷ್ಣಮೂರ್ತಿ, ಎಸ್.ಶಿವಾನಂದ, ಸಿ.ಪರಶುರಾಮ ಪೂಜಾರ, ಆರ್.ಗಿರೀಶ, ಎಂ.ಚಂದ್ರಪ್ಪ ಅವರಗೆರೆ, ಜಿ.ಎಚ್.ನಾಗರಾಜ, ಆವರಗೆರೆ ಸುಜಾತ ಇತರರು ಇದ್ದರು.

- - -

-9ಕೆಡಿವಿಜಿ10:

ದಾವಣಗೆರೆಯಲ್ಲಿ ಡಿಎಸ್‌ಎಸ್‌ ನೇತೃತ್ವದಲ್ಲಿ ಶುಕ್ರವಾರ ಆವರಗೆರೆ ದನವಿನ ಓಣಿ ಗುಡಿಸಲು ವಾಸಿಗಳಾಗಿದ್ದ ಸಂತ್ರಸ್ತರು ತಮಗೆ ಪುನರ್ವಸತಿ, ಪರಿಹಾರಕ್ಕೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.