ಸಾರಾಂಶ
ವಾಹನಗಳ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ವಾಹನಗಳ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ಜಾರಿ ವಿರೋಧಿಸಿ ಪಟ್ಟಣದಲ್ಲಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಸಂಘಟನೆಯಿಂದ ಚಾಲಕರು ಪ್ರತಿಭಟನೆ ನಡೆಸಿದರು.
- ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಸಂಘಟನೆಯಿಂದ ತಾಲೂಕು ಕಚೇರಿ ಮುಂದೆ ಧರಣಿ
ಕನ್ನಡಪ್ರಭ ವಾರ್ತೆ, ಕಡೂರುವಾಹನಗಳ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ವಾಹನಗಳ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ಜಾರಿ ವಿರೋಧಿಸಿ ಪಟ್ಟಣದಲ್ಲಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಸಂಘಟನೆಯಿಂದ ಚಾಲಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ತಾಲೂಕಿನ ವಾಹನಗಳ ಚಾಲಕರು ನಮಗೆ ಮಾರಕವಾಗಿರುವ ಕಾನೂನು ರದ್ದು ಗೊಳಿಸುವಂತೆ ಪ್ರತಿಭಟನೆ ನಡೆಸಿ ರಾಜ್ಯಸರ್ಕಾರಕ್ಕೆ ಆಗ್ರಹಿಸಿದರು. ಚಾಲಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, ಕೇಂದ್ರ ಸರಕಾರ ಇತ್ತೀಚೆಗೆ ವಾಹನ ಚಾಲಕರಿಗೆ ಹೊಸ ಕಾನೂನು ಜಾರಿಗೆ ತಂದಿದ್ದು, ಹಿಟ್ ಅಂಡ್ ರನ್ ಕೇಸಿನಲ್ಲಿ ವಿಧಿಸಿರುವ ಶಿಕ್ಷೆ ರದ್ದುಗೊಳಿಸಬೇಕು. ಅಪಘಾತವೆಸಗಿದ ಚಾಲಕರಿಗೆ ಕೇಂದ್ರ ಸರಕಾರದ ಹೊಸ ಕಾನೂನಿನಲ್ಲಿ 10 ವರ್ಷ ಜೈಲು ಮತ್ತು 7 ಲಕ್ಷ ರು. ದಂಡ ವಿಧಿಸಿರುವ ಕಾನೂನನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದರು.ಈ ವೃತ್ತಿಯನ್ನೆ ನಂಬಿ ಬದುಕುತ್ತಿರುವ ಬಹುತೇಕ ಚಾಲಕರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಾಲೀಕರು ನೀಡುವ ವೇತನದಲ್ಲೇ ನಮ್ಮ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಇದರಿಂದ ನಮ್ಮನ್ನೇ ನಂಬಿರುವ ಕುಟುಂಬಸ್ಥರಿಗೆ ತೊಂದರೆಯಾಗುತ್ತಿದ್ದು, ಕೇಂದ್ರ ಜಾರಿಗೊಳಿಸಿರುವ ಮಾರಕವಾದ ಈ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಗೂ ಮುನ್ನ ವಾಹನ ಚಾಲಕರು ಕಡೂರು ಎಪಿಎಂಸಿ ಆವರಣದಿಂದ ಮೆರವಣಿಗೆ ಹೊರಟು ಕೆ.ಎಸ್.ಆರ್.ಟಿ.ಸಿ ಬಸ್ಟಾಂಡ್ ಮೂಲಕ ಕನಕ ವೃತ್ತಕ್ಕೆತೆರಳಿ ರೈಲ್ವೆ ಗೇಟಿನಿಂದ ಸಾಗಿ ತಾಲೂಕು ಕಚೇರಿಗೆ ತೆರಳಿದರು.ಬಳಿಕ ಉಪ ತಹಸೀಲ್ದಾರ್ ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಶ್ರೀಕಾಂತ್, ಗೌರವಾಧ್ಯಕ್ಷ ಮೈಲಾರಪ್ಪ, ಪದಾಧಿಕಾರಿಗಳಾದ ನವೀನ್, ರಾಜು, ಚಂದ್ರು, ಪ್ರದೀಪ್ ಕುಮಾರ್ ನಾಯ್ಕ್, ಜಗದೀಶ್ ಸೇರಿದಂತೆ ನೂರಾರು ವಾಹನಗಳ ಚಾಲಕರು ಇದ್ದರು.18ಕೆಕೆಡಿಯು1.
ಕಡೂರು ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಸಂಘಟನೆಯಿಂದ ವಾಹನಗಳ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ವಾಪಸ್ ಪಡೆಯುವಂತೆ ಆಗ್ರಹಿಸಿ ಚಾಲಕರು ಮನವಿ ಅರ್ಪಿಸಿದರು.