ಹನೂರು ಪಟ್ಟಣ ಪಂಚಾಯಿತಿ ಮುಂದೆ ಕಸ ಸುರಿದು ಪ್ರತಿಭಟನೆ

| Published : Sep 09 2024, 01:35 AM IST

ಹನೂರು ಪಟ್ಟಣ ಪಂಚಾಯಿತಿ ಮುಂದೆ ಕಸ ಸುರಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ಪಟ್ಟಣದ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡಲು ಅಧಿಕಾರಿ ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯ ವಿರೋಧಿಸಿ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಕಸ ಸುರಿದು ವಿನೂತನವಾಗಿ ಪಟ್ಟಣದ ನಿವಾಸಿಗಳು ಪ್ರತಿಭಟನೆ ನಡೆಸಿದರು.

ವಿನೂತನ ಪ್ರತಿಭಟನೆ । ಪಟ್ಟಣ ನಿವಾಸಿಗಳಿಂದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ । 13 ವಾರ್ಡ್‌ಗಳಲ್ಲಿಯೂ ಅಶುಚಿತ್ವ ವಾತಾವರಣ

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡಲು ಅಧಿಕಾರಿ ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯ ವಿರೋಧಿಸಿ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಕಸ ಸುರಿದು ವಿನೂತನವಾಗಿ ಪಟ್ಟಣದ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್‌ಗಳಲ್ಲಿಯೂ ಅಶುಚಿತ್ವ ವಾತಾವರಣ ಹಾಗೂ ಚರಂಡಿಗಳಲ್ಲಿ ಹೂಳು ತುಂಬಿ ಗಿಡ ಗಂಟೆಗಳು ಬೆಳೆದು ಅನೈರ್ಮಲ್ಯ ವಾತಾವರಣದಿಂದ ಪಟ್ಟಣದ ನಾಗರಿಕರು ಬೇಸರಗೊಂಡು ಗೌರಿ ಗಣೇಶ ಹಬ್ಬದ ದಿನದಂದೇ ಪಟ್ಟಣ ಪಂಚಾಯಿತಿ ಕಚೇರಿಗೆ ಕಸ ಸುರಿದು ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಎಂಟನೇ ವಾರ್ಡ್‌ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಳೆದ ಒಂದು ವಾರದಿಂದ ಕಸ ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಅವರಿಗೆ ಸಾಕಷ್ಟು ಬಾರಿ ನಿವಾಸಿಗಳು ತಿಳಿಸಿದ್ದರೂ ಸಹ ಅಧಿಕಾರಿಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು ಇದರಿಂದ ಬೇಸತ್ತ ಪಟ್ಟಣದ ಎಂಟನೇ ವಾರ್ಡಿನ ನಿವಾಸಿಗಳು ಕಸವನ್ನು ಆಟೋದಲ್ಲಿ ತುಂಬಿಕೊಂಡು ಬಂದು ಕಚೇರಿ ಮುಂಭಾಗ ಕಸ ಸುರಿದು ಪಟ್ಟಣ ಪಂಚಾಯತಿ ಆಡಳಿತ ಮಂಡಳಿಯ ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ಭರಿತವಾಗಿ ಮಾತನಾಡಿದರು.

ಜನಪ್ರತಿನಿಧಿಗಳ ಮಾತಿಗೂ ಮನ್ನಣೆ ಇಲ್ಲ:

ಕಳೆದ ವಾರವಷ್ಟೇ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಹ ನಡೆದಿದೆ ಜತೆಗೆ ಸಭೆ ಕರೆದು ಅಧಿಕಾರಿಗಳ ಮತ್ತು ಸಿಬ್ಬಂದಿಗೆ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡುವಂತೆ, ಕುಡಿಯುವ ನೀರಿನ ಸಮಸ್ಯೆ ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದರೂ ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಅಶೋಕ್ ಮತ್ತು ಇಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ತುಂಬಿದೆ.

ಕೇಂದ್ರ ಸ್ಥಾನದಲ್ಲಿ ದುರ್ವಾಸನೆ:

ತಾಲೂಕಿನ ಪಟ್ಟಣ ಪಂಚಾಯಿತಿ ಕೇಂದ್ರ ಸ್ಥಾನದ ಸಮೀಪದಲ್ಲಿ ಬರುವ ಶೌಚಾಲಯದ ಸುತ್ತಲೂ ಸಹ ಸ್ವಚ್ಛಗೊಳಿಸದೆ ಪ್ಲಾಸ್ಟಿಕ್ ಕಸಕಡ್ಡಿ ಜೊತೆಯಲ್ಲಿ ಕೊಳಚೆ ನೀರು ನಿಂತು ದುರ್ನಾಥ ಬೀರುತ್ತಿದೆ. ಪಟ್ಟಣದ ವಿವಿಧ ವಾರ್ಡ್‌ಳಲ್ಲಿ ಕಸ ವಿಲೇವಾರಿ ಮಾಡದೆ ಗೌರಿ ಗಣೇಶ ಹಬ್ಬದ ದಿನ ನಿವಾಸಿಗಳು ಪರದಾಡುವ ಸ್ಥಿತಿ ಇದ್ದು ರೋಗಗಕೇಂದ್ರ ಸ್ಥಾನವಾಗಿ ಮಾರ್ಪಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಶಾಸಕರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಮುಂಭಾಗ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.

ಬಸವರಾಜ್, ಮಾಜಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರು, ಹನೂರು ಟೌನ್.