ನೊಟೀಸ್ ಹಿಂಪಡೆಯಲು ರೈತ ಸಂಘಟನೆಗಳ ಪ್ರತಿಭಟನೆ

| Published : Nov 05 2024, 12:43 AM IST

ಸಾರಾಂಶ

ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ಕೆಲವು ರೈತರಿಗೆ ನೊಟೀಸ್ ನೀಡಿದ್ದು, ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಕ್ರಾಂತಿಕಾರಿ ರೈತ ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.

ನೋಟಿಸ್ ನೀಡಿದ ಅಧಿಕಾರಿಗಳನ್ನು ಸರ್ಕಾರ ಕೂಡಲೇ ವಜಾ ಮಾಡಬೇಕುಕನ್ನಡಪ್ರಭ ವಾರ್ತೆ ಕುಕನೂರು

ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ಕೆಲವು ರೈತರಿಗೆ ನೊಟೀಸ್ ನೀಡಿದ್ದು, ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಕ್ರಾಂತಿಕಾರಿ ರೈತ ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.

1995 ಮತ್ತು 2013ರಲ್ಲಿ ಆಗಿರುವ ವಕ್ಫ್ ಕಾಯ್ದೆಯು ರೈತ ವಿರೋಧಿಯಾಗಿದೆ. ಇದನ್ನು ತಕ್ಷಣ ತಿದ್ದುಪಡಿ ಮಾಡಬೇಕು. ರೈತರ ಪಹಣಿಗಳಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ವಕ್ಫ್ ಆಸ್ತಿ ಎಂದು ಹೆಸರು ನಮೂದಿಸಿದ್ದು, ತಕ್ಷಣ ಅದನ್ನು ತೆಗೆದು ಹಾಕಬೇಕು. ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನೋಂದಾಯಿಸಿ ಮತ್ತು ನೋಟಿಸ್ ನೀಡಿದ ಅಧಿಕಾರಿಗಳನ್ನು ಸರ್ಕಾರ ಕೂಡಲೇ ವಜಾ ಮಾಡಬೇಕು. ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲ ರೈತರ ಜಮೀನುಗಳಿಗೆ ತೊಂದರೆ ನೀಡುವುದಿಲ್ಲ, ಯಾವುದೇ ಖಾತೆ ಬದಲಾವಣೆ ಮಾಡುವುದಿಲ್ಲ ಎಂದು ಆದೇಶ ಮತ್ತು ಮಾರ್ಗಸೂಚಿ ಸರ್ಕಾರ ಕೂಡಲೇ ಹೊರಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿರುವ ಕೆಲ ರೈತರ ಜಮೀನಿನಲ್ಲಿ ಇನಾಂ, ವಕ್ಫ್, ಸರ್ಕಾರ ಎಂದು ನಮೂದಿಸಿದ್ದನ್ನು ತಕ್ಷಣ ತೆಗೆದು ಹಾಕಬೇಕು. ವಕ್ಫ್ ಹೆಸರಿನಲ್ಲಿ ರೈತರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗುತ್ತಿದ್ದು, ಇದನ್ನು ಇಲ್ಲಿಗೆ ಕೈಬಿಡಬೇಕು. ಕೊಪ್ಪಳ ತಾಲೂಕಿನಲ್ಲಿ 997 ಎಕರೆ, ಕುಕನೂರು ತಾಲೂಕಿನಲ್ಲಿ 974 ಎಕರೆ, ಕುಷ್ಟಗಿ ತಾಲೂಕಿನಲ್ಲಿ 607 ಎಕರೆ, ಯಲಬುರ್ಗಾ ತಾಲೂಕಿನಲ್ಲಿ 324 ಎಕರೆ, ಕನಕಗಿರಿಯಲ್ಲಿ 257 ಎಕರೆ, ಗಂಗಾವತಿಯಲ್ಲಿ 167 ಎಕರೆ, ಕಾರಟಗಿ ತಾಲೂಕಿನಲ್ಲಿ 149 ಎಕರೆ, ಜಮೀನು ಇದೆ ಎಂದು ಜಿಲ್ಲಾ ವಕ್ಫ್ ಇಲಾಖೆ ಹೇಳುತ್ತಿದೆ. ಎಲ್ಲ ಆಸ್ತಿಗಳನ್ನು ವಕ್ಫ್ ಇಲಾಖೆಯಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಕ್ರಾಂತಿಕಾರಿ ಸೈನ್ಯ ರಾಜ್ಯಾಧ್ಯಕ್ಷ ಎಂ.ಎನ್. ಕುಕನೂರ, ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ವಿಶ್ವ ಹಿಂದೂ ಪರಿಷತ್‌ ಯಲಬುರ್ಗಾ- ಕುಕನೂರು ತಾಲೂಕಾಧ್ಯಕ್ಷ ರಾಜಶೇಖರ ದ್ಯಾಂಪೂರ, ಹಿಂದೂ ಜಾಗರಣ ವೇದಿಕೆ ಕುಕನೂರು ತಾಲೂಕಾಧ್ಯಕ್ಷ ವಿನಯ ಸರಗಣಚಾರ, ಪ್ರಮುಖರಾದ ದೇವಪ್ಪ ಸೊಬಾನದ, ರಾಜೇಶ ವಾಲ್ಮೀಕಿ, ಮಾಜಿದ ಮುಲ್ಲಾ, ಕಳಕಪ್ಪ ಕ್ಯಾದಗುಂಪಿ, ಈಶಪ್ಪ ಸಬರದ, ಬಷಿರಹ್ಮದಖಾನ ಮುಲ್ಲಾ, ನೂರುಸಾಬ ಹಣಜಗಿರಿ, ದೊಡ್ಡಪ್ಪ ಬಾವಿಕಟ್ಟಿ ಇತರರಿದ್ದರು.