ಸಾರಾಂಶ
ಜೆಸಿಬಿ ಮೇಲೆ ಕಲ್ಲು ಎಸೆದು, ಗುತ್ತಿಗೆದಾರನ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಪ್ರತಿಭಟನಾಕಾರರು
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಲಗಾ ಗ್ರಾಮದಿಂದ ಮಚ್ಚೆ ಗ್ರಾಮದವರೆಗೂ ಹೆದ್ದಾರಿ ಕಾಮಗಾರಿಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಲಾರವಾಡದಲ್ಲಿ ಕಾಮಗಾರಿ ಆರಂಭಿಸಿರುವುದನ್ನು ವಿರೋಧಿಸಿ ರೈತರು ಮಂಗಳವಾರ ಜೆಸಿಬಿ ಮೇಲೆ ಕಲ್ಲು ಎಸೆದು, ಗುತ್ತಿಗೆದಾರನ ಮೇಲೆ ಹಲ್ಲೆ ಮಾಡಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿ ಘಟನೆ ನಡೆಯಿತು.ಕೃಷಿ ಜಮೀನಿನಲ್ಲಿ ಹೆದ್ದಾರಿ ನಿರ್ಮಾಣ ವಿವಾದ ಕಳೆದ 11 ವರ್ಷಗಳಿಂದ ನ್ಯಾಯಾಲಯದಲ್ಲಿ ರೈತರು ಕಾನೂನು ಹೋರಾಟವನ್ನು ನಡೆಸಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಂಡಿದೆ. ಆದರೆ ಕಾಮಗಾರಿ ಆರಂಭಿಸಿ ಎಂದು ನ್ಯಾಯಾಲಯ ಹೇಳಿಲ್ಲ. ಯಾರನ್ನು ಕೇಳಿ ಕಾಮಗಾರಿ ಆರಂಭಿಸಿದ್ದೀರಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿದ ರೈತರು ಕಾಮಗಾರಿ ಆರಂಭದ ದಾಖಲಾತಿ ತೋರಿಸಿ ಎಂದು ಕಾರ್ ಎದುರು ಕುಳಿತುಕೊಂಡು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಆಗಮಿಸಿ ರೈತರನ್ನು ಮನವೊಲಿಸಿದರೂ ಬಗ್ಗದ ರೈತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೈಕೋಟ್೯ನಲ್ಲಿ ರೈತರ ವಿಶ್ವಾಸವನ್ನು ತೆಗೆದುಕೊಳ್ಳುವವರೆಗೂ ಕಾಮಗಾರಿ ಆರಂಭಿಸಬಾರದು. ರೈತರಿಗೆ ಪರಿಹಾರ ಕೊಡುವವರೆಗೂ ಯಾವುದೇ ಕಾಮಗಾರಿ ಮಾಡದಂತೆ ಸೂಚನೆ ನೀಡಿದರೂ ಕಾಮಗಾರಿ ಆರಂಭಿಸಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.ಈ ವೇಳೆ ರೈತ ಮುಖಂಡರಾದ ರಾಜು ಮೊರವೆ, ಪ್ರಕಾಶ ನಾಯಕ, ರವಿ ಪಾಟೀಲ್, ಶ್ರೀರಾಮ್ ಸೇನಾ ಹಿಂದೂಸ್ತಾನ್ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))