ತಕ್ಷಣ ರೈತರ ಸಭೆ ಕೆರೆದು ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ಭೂಪರಿಹಾರ, ರೈತನ ಮನೆಗೊಂದು ಉದ್ಯೋಗ, ರೈತನಿಗೆ ಪರ್ಯಾಯ ಜಮೀನು ನೀಡಲು ಕ್ರಮ ವಹಿಸಬೇಕು. ಎಚ್ ಎನ್ ವ್ಯಾಲಿ 3ನೇ ಹಂತದ ಶುದ್ಧೀಕರಣ ಮಾಡಲು ಕ್ರಮ ವಹಿಸಬೇಕು .
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ 13 ಹಳ್ಳಿಗಳ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಆದೇಶದಂತೆ ತ್ವರಿತ ಗತಿಯಲ್ಲಿ ದರಪಟ್ಟಿ ನಿಗದಿ ಮಾಡುವುದು ಹಾಗೂ ಜಿಲ್ಲೆಯ ಇತರೆ ರೈತರ ಸಮಸ್ಯೆಗಳ ನಿವಾರಿಸಲು ಆಗ್ರಹಿಸಿ ಮಾ. 23ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತರ ಪರ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲು ತೀರ್ಮಾನಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಮೂಲಕ ಸಲ್ಲಿಸಲಾಯಿತು.ನಂತರ ರೈತರ ಪರ ಹೋರಾಟ ಸಮಿತಿಯ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ 2823 ಎಕರೆ ಜಮೀನು ಸ್ವಾಧೀನಕ್ಕಾಗಿ 2024ರ ಜೂನ್ 25ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಇಲ್ಲಿನ ರೈತಸಂಘಟನೆ ಹಾಗೂ ನಾವು ಫಲವತ್ತಾದ ಕೃಷಿ ಯೋಗ್ಯ ನೀರಾವರಿ ಪ್ರದೇಶ ಸ್ವಾಧೀನದಿಂದ ಕೈ ಬಿಡಬೇಕು. ಉಳಿದ ಜಮೀನುಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಬೇಕೆಂದು ಹೋರಾಟ ನಡೆಸಿದ ಪರಿಣಾಮ, 2026 ಫೆಬ್ರವರಿ 25ರಂದು 491 ಎಕರೆ ಬಿಟ್ಟು ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 2332 ಎಕರೆ ಜಮೀನು ಭೂಸ್ವಾಧೀನದ ಅಂತಿಮ ದರಪಟ್ಟಿ ತೀರ್ಮಾನ ಮಾಡಬೇಕೆಂದು ಸರ್ಕಾರವನ್ನು ಓತ್ತಾಯಿಸಲು ಧರಣಿ ಹಮ್ಮಿಕೊಳ್ಳುತ್ತೇವೆಂದರು.
ತಕ್ಷಣ ರೈತರ ಸಭೆ ಕೆರೆದು ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ಭೂಪರಿಹಾರ, ರೈತನ ಮನೆಗೊಂದು ಉದ್ಯೋಗ, ರೈತನಿಗೆ ಪರ್ಯಾಯ ಜಮೀನು ನೀಡಲು ಕ್ರಮ ವಹಿಸಬೇಕು. ಎಚ್ ಎನ್ ವ್ಯಾಲಿ 3ನೇ ಹಂತದ ಶುದ್ಧೀಕರಣ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಚಿಕ್ಕಬಳ್ಳಾಪುರ ತಾಲೂಕಿನ ನಂದಿಹೋಬಳಿ ಕುಡವತಿ ಗ್ರಾಮದ ರೈತರಿಗೆ ದಾರಿ ಸಮಸ್ಯೆ ನಿವಾರಿಸಬೇಕು. ಶಿಡ್ಲಘಟ್ಟ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಉತ್ತರ ವಿಶ್ವ ವಿದ್ಯಾನಿಲಯಕ್ಕೆ ಜಮೀನು ನೀಡಿದ ರೈತರಿಗೆ ಭೂಮಿ ನೀಡುವಾಗ ಫಲವತ್ತಾದ ಕೃಷಿ ಜಮೀನು ಶ್ರೀಮಂತ ಬಲಾಢ್ಯರಿಗೆ ನೀಡಿರುವುದನ್ನು ಖಂಡಿಸುತ್ತೇವೆ. ತಾಲೂಕಿನಲ್ಲಿ ನಿರಾಶ್ರಿತರಿಗೆ ನಿವೇಶನ, ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 50 ರು.ಬೆಂಬಲ ಬೆಲೆ ನೀಡಬೇಕು ಎಂದು ಅವರು ಆಗ್ರಹಿಸಿದರು.