ಬರ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

| Published : May 16 2024, 12:55 AM IST / Updated: May 16 2024, 08:43 AM IST

ಸಾರಾಂಶ

ಬರಗಾಲದಿಂದ ಸಂಪೂರ್ಣ ಬೆಳೆ ನಾಶವಾಗಿ ವಿಮಾ ಕಂಪನಿ ಮಧ್ಯಂತರ ಪರಿಹಾರವಾಗಿ ಕೇವಲ ಶೇ ೨೫ ಕೊಟ್ಟಿದ್ದು, ಬೇಕಾಬಿಟ್ಟಿ ಸಮೀಕ್ಷ ನಡೆಸಿ ಬೆಳೆ ವಿಮೆಯಲ್ಲಿ ಅನ್ಯಾಯ ಮಾಡಿದ್ದಾರೆ. ಕೂಡಲೇ ಜಿಲ್ಲಾಡಳಿತ ಪುನರ್ ಪರಿಶೀಲಿಸಿ ವಿಮೆ ಹಣ ಕೋಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

 ಹಿರೇಕೆರೂರು :  ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್ ನಿಯಮದ ಅನ್ವಯ ಪ್ರತಿ ಹಕ್ಟೇರ್‌ಗೆ ೬೫೦೦ ಬರ ಪರಿಹಾರ ಕೊಟ್ಟು ರೈತರಿಗೆ ಧೈರ್ಯ ತುಂಬಬೇಕಾಗಿತ್ತು. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಪರಿಹಾರದ ಮೇಲೆ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ನಂತರ ಮಾತನಾಡಿ, ಸರ್ಕಾರ ರೈತರ ಸಮಾಧಿ ಮೇಲೆ ಮಹಲ್ ಕಟ್ಟಿ ರೈತ ಕುಲವನ್ನು ನಾಶ ಮಾಡಲು ಹೊರಟ್ಟಿದ್ದು, ಕೊನೆಗೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿ ಕೊನೆಗೆ ೩,೬೭೦ ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಸ್ವಾಗತಾರ್ಹ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಬೆಳೆ ನಷ್ಟ ಪರಿಹಾರ ಪ್ರತಿ ಹೆಕ್ಟೇರ್‌ಗೆ 6500 ಕೊಡಬೇಕಾಗಿತ್ತು. ಕೇವಲ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ಕೂಡಲೇ ಪರಿಹಾರ ಹಣಬಿಡುಗಡೆ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು ಅರ್ಜಿ ತೆಗೆದುಕೊಳ್ಳುವುದನ್ನು ನಿಲ್ಲಿಸಿ ರೈತರಿಗೆ ದ್ರೋಹ ಎಸಗಿದೆ. ಅಕ್ರಮ ಸಕ್ರಮ ಯೋಜನೆಗೆ ಹಣ ತುಂಬಿಸಿಕೊಂಡು ಮೂರು ವರ್ಷವಾದರೂ ವಿದ್ಯುತ್ ಕಂಬ, ವೈರ್‌, ಟಿ.ಸಿ. ಕೊಡುವುದನ್ನು ನಿಲ್ಲಿಸಿದೆ. ಓವರ್‌ಲೋಡ್ ಆದ ಟಿಸಿಗಳಿಗೆ ಹೆಚ್ಚಿನ ಸಾಮರ್ಥ್ಯದ ಟಿ.ಸಿ.ಗಳನ್ನು ನೀಡಬೇಕು. ಬೆಳೆ ವಿಮೆಯಲ್ಲಿ ಸಾಕಷ್ಟು ತಾರತಮ್ಯ ನಡೆದಿದ್ದು ಬರಗಾಲದಿಂದ ಸಂಪೂರ್ಣ ಬೆಳೆ ನಾಶವಾಗಿ ವಿಮಾ ಕಂಪನಿ ಮಧ್ಯಂತರ ಪರಿಹಾರವಾಗಿ ಕೇವಲ ಶೇ 25 ಕೊಟ್ಟಿದ್ದು, ಬೇಕಾಬಿಟ್ಟಿ ಸಮೀಕ್ಷ ನಡೆಸಿ ಬೆಳೆ ವಿಮೆಯಲ್ಲಿ ಅನ್ಯಾಯ ಮಾಡಿದ್ದಾರೆ. ಕೂಡಲೇ ಜಿಲ್ಲಾಡಳಿತ ಪುನರ್ ಪರಿಶೀಲಿಸಿ ವಿಮೆ ಹಣ ಕೋಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಮಾತನಾಡಿ, ಕಳೆದ ೮ ತಿಂಗಳಿಂದ ಹಾಲಿನ ಸಹಾಯಧನ ಕೊಟ್ಟಿಲ್ಲ. ಬರಗಾಲದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಕೂಡಲೇ ಸಹಾಯಧನ ಬಿಡುಗಡೆ ಮಾಡಿ ಹಾಲು ಉತ್ಪಾದಕರಿಗೆ ಅನುಕೂಲ ಮಾಡಬೇಕು. ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಪ್ರಸ್ತುತ ವರ್ಷ ಭೀಕರ ಬರಗಾಲದಿಂದ ಅನ್ನದಾತರು ಕಂಗಾಲಾಗಿದ್ದಾರೆ. ಎರಡು ಬಾರಿ ಭೂಮಿಗೆ ಬಂಡವಾಳ ಹಾಕಿದ್ದು ಹಿಂಗಾರು ಕೂಡ ಕೈ ಕೊಟ್ಟಿದ್ದು ಬರಗಾಲದ ತೀವ್ರತೆ ಹೆಚ್ಚಾಗಿದೆ. ಕೂಡಲೇ ಸರ್ಕಾರಗಳು ಎಸ್‌ಡಿಎಫ್ ನ ಪ್ರಕಾರ ಪ್ರತಿ ಹೇಕ್ಟರ್‌ಗೆ ೮೫೦೦ ಪರಿಹಾರ ಕೊಡಬೇಕು. ಈ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಯಶವಂತ ತಿಮಕಾಪುರ, ಮರಡೆಯಪ್ಪ ಬಣಕಾರ, ಶಾಂತನಗೌಡ ಪಾಟೀಲ, ಪುಟ್ಟಯ್ಯ ಮಳಿಲಿಮಠ, ಸಚಿನ ಬೂದಿಹಾಳ, ಮಂಜು ಮುಳಗುಂದ, ಪರಮೇಶ ಪಾಟೀಲ, ಮೂಕನಗೌಡ ಸಣ್ಣಮನಿ. ನಾಗರಾಜ ಪ್ಯಾಟಿ, ಹೇಮನಗೌಡ ಪುಜಾರ, ಶಂಕರಪ್ಪ ಮರಕಳ್ಳಿ, ಉಜಪ್ಪ ಪುಜಾರ, ಮರಿಗೌಡ ಪಾಟೀಲ ರೈತರು ಇದ್ದರು.