ಪೆರಿಫೆರಲ್‌ ರಿಂಗ್‌ ರಸ್ತೆಗೆ ಜಾಗ ಕೊಟ್ಟ ರೈತರಿಂದ ಪ್ರತಿಭಟನೆ

| Published : Feb 10 2024, 01:46 AM IST / Updated: Feb 10 2024, 11:35 AM IST

ಸಾರಾಂಶ

ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಜಾಗ ಬಿಟ್ಟುಕೊಟ್ಟ ಬಿಡಿಎ ಈ ಕೂಡಲೇ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನಿಗದಿಪಡಿಸಬೇಕು. ಇಲ್ಲವೇ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ನಿವೇಶನದಾರರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಿಆರ್‌ಆರ್‌ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡು 18 ವರ್ಷಗಳಾಗಿದ್ದರೂ ಈವರೆಗೂ ಪರಿಹಾರ ನೀಡದಿರುವ ಬಿಡಿಎ ನಿರ್ಲಕ್ಷ್ಯ ಖಂಡಿಸಿ ರೈತರು ಮತ್ತು ನಿವೇಶನದಾರರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಬಿಡಿಎ ಕೇಂದ್ರ ಕಚೇರಿ ಎದುರು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಬಿಡಿಎಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದರಿಂದಾಗಿ ಕೆಲಕಾಲ ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಂಗಳೂರು ನಗರದಲ್ಲಿ ಪೆರಿಫೆರಲ್‌ ರಿಂಗ್‌ ರಸ್ತೆ ಅಭಿವೃದ್ಧಿ ಯೋಜನೆಗಾಗಿ 65 ಕಿ.ಮೀ. ಉದ್ದದ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕಾಗಿ 1810 ಎಕರೆ ರೈತರ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿ 19 ವರ್ಷಗಳು ಆಗಿದೆ. 

ಆದರೆ, ಈವರೆಗೂ ರೈತರಿಗೆ ಸೂಕ್ತ ಪರಿಹಾರ ನಿಗದಿಪಡಿಸಿಲ್ಲ ಮತ್ತು ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಿಲ್ಲ. ಬಿಡಿಎ ಕಾಯ್ದೆಯಲ್ಲಿರುವಂತೆ ಯೋಜನೆಯ ಕಾಲಾವಧಿ ಐದು ವರ್ಷಗಳು ಮುಗಿದಿದ್ದು, ಯೋಜನೆಯು ರದ್ದಾಗುವಂತೆ ಕಾಯ್ದೆ ಹೇಳುತ್ತದೆ. ಆದ್ದರಿಂದ ಬಿಡಿಎ ಕೂಡಲೇ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನಿಗದಿಪಡಿಸಬೇಕು. ಇಲ್ಲವೇ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿರುವ ಕೆಐಎಡಿಬಿ, ಕೆಎಚ್‌ಬಿ, ಎನ್‌ಎಚ್‌ಎಐ ಸಂಸ್ಥೆಗಳು 2013ರ ಭೂಸ್ವಾಧೀನ ಕಾಯ್ದೆಯನ್ನು ಅನುಸರಿಸಿ ರೈತರಿಗೆ ಪರಿಹಾರ, ಪುನರ್ವಸತಿ ನೀಡುತ್ತಿವೆ. ಆದರೆ, ಬಿಡಿಎ 2013ರ ಕಾಯ್ದೆ ಈ ಯೋಜನೆಗೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತಿದೆ. 

ಬ್ರಿಟಿಷ್‌ ಕಾಲದ 1894ರ ಭೂಸ್ವಾಧೀನ ಕಾಯ್ದೆಯಡಿಯಲ್ಲಿ ಯೋಜನೆ ರೂಪಿಸಿ ಪರಿಹಾರ ನೀಡುವುದಾಗಿ ಹೇಳುತ್ತಿದೆ. ಬಿಡಿಎ ರೈತರ ಮೇಲೆ ಧಮನಕಾರಿ ಪ್ರವೃತ್ತಿ ನಡೆಸುತ್ತಿರುವುದು ಸರ್ಕಾರಕ್ಕೆ ಗೊತ್ತಿದ್ದರೂ ರೈತರ ಹಿತಾಸಕ್ತಿ ಕಾಯುತ್ತಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘದ ಗೌತಮ್‌ಚಂದ್‌ ಜೈನ್‌, ಗೋಪಾಲರೆಡ್ಡಿ, ಕೃಷ್ಣ, ಗೋವಿಂದರಾಜು, ವೆಂಕಟೇಶ, ನರಸಿಂಹಮೂರ್ತಿ, ರಘು ಪಾಲ್ಗೊಂಡಿದ್ದರು.

ಸಕಾರಾತ್ಮಕ ಪ್ರತಿಕ್ರಿಯೆ: ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರೀಸ್ ಅವರು ಪ್ರತಿಭಟನಾಕಾರರನ್ನು ಭೇಟಿಯಾಗಿ ಪಿಆರ್‌ಆರ್‌ ಯೋಜನೆಗೆ ಸಂಬಂಧಿಸಿದಂತೆ 2013ರ ಭೂಸ್ವಾಧೀನ ಕಾಯ್ದೆ ಅನ್ವಯವೇ ಪರಿಹಾರ ಕೊಡಿಸುವ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು. 

ರೈತರ ಅನುಕೂಲಕ್ಕಾಗಿ 2013ರ ಭೂಸ್ವಾಧೀನ ಕಾಯ್ದೆಯು ಮನಮೋಹನ್‌ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿದೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಬಿಡಿಎ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘದ ಮಾವಳಿಪುರ ಶ್ರೀನಿವಾಸ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.