ಬಲ್ದೋಟ ಕಂಪನಿ ಆರಂಭಿಸಿ ಎಂದು ಕಂಪನಿಗೆ ಭೂಮಿ ನೀಡಿರುವ ರೈತರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು. ನಗರದ ತಾಲೂಕು ಕ್ರಿಡಾಂಗಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿತು. ಆನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೊಪ್ಪಳ: ಬಲ್ದೋಟ ಕಂಪನಿ ಆರಂಭಿಸಿ ಎಂದು ಕಂಪನಿಗೆ ಭೂಮಿ ನೀಡಿರುವ ರೈತರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ನಗರದ ತಾಲೂಕು ಕ್ರಿಡಾಂಗಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿತು. ಆನಂತರ ಜಿಲ್ಲಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿ, ಬಲ್ದೋಟ ಕಂಪನಿ ಆರಂಭಿಸುವ ಮೂಲಕ ಮೂಲಕ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಅಥವಾ ಭೂಮಿ ನೀಡಿದ ರೈತರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ಭೂಮಿ ನೀಡಿದ ಸಂದರ್ಭದಲ್ಲಿ ಕೈಗಾರಿಕೆ ಸ್ಥಾಪನೆಯಾಗಿ ಸ್ಥಳೀಯ ಪ್ರದೇಶದ ಅಭಿವೃದ್ಧಿಗೆ ವೇಗ ದೊರೆಯಲಿದೆ. ರೈತ ಕುಟುಂಬಗಳ ಯುವಕರಿಗೆ ಉದ್ಯೋಗ ಸಿಗಲಿದೆ ಎಂಬ ಭರವಸೆ ಇತ್ತು. ಆದರೆ ಎರಡು ದಶಕಗಳು ಕಳೆದರೂ ನಿರೀಕ್ಷಿತ ಕೈಗಾರಿಕೆ ಸ್ಥಾಪನೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರ್ಯಾಯ ಜೀವನೋಪಾಯ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಸಂಸ್ಥೆಗಳು ವಿಫಲವಾಗಿವೆ. ಭೂಮಿ ಕಳೆದುಕೊಂಡ ಕುಟುಂಬಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಹಲವು ಕುಟುಂಬಗಳ ಯುವಕರು ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಲ್ದೋಟ ಕಂಪನಿ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕಂಪನಿ ಸ್ಥಾಪಿಸಲು ಸಾಧ್ಯವಿದ್ದರೆ ತ್ವರಿತವಾಗಿ ಕಾಮಗಾರಿ ಆರಂಭಿಸಿ, ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕು. ಕಂಪನಿ ಸ್ಥಾಪನೆ ಸಾಧ್ಯವಿಲ್ಲದಿದ್ದರೆ, ಭೂಮಿ ನೀಡಿದ ರೈತ ಕುಟುಂಬಗಳ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಇಪ್ಪತ್ತು ವರ್ಷಗಳ ಹಿಂದಿನ ಭರವಸೆಗಳನ್ನು ಇನ್ನೂ ಮುಂದುವರಿಸಿಕೊಂಡು ಹೋಗುವುದರಿಂದ ರೈತರ ಸಮಸ್ಯೆ ಪರಿಹಾರವಾಗುವುದಿಲ್ಲ. ಸರ್ಕಾರ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ, ಭೂಮಿ ನೀಡಿದ ರೈತರ ಸಮಸ್ಯೆಗಳನ್ನು ಆಲಿಸಿ, ಶಾಶ್ವತ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಭೂಮಿ ಕಳೆದುಕೊಂಡ ರೈತರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವರ್ಷಗಳ ಕಾಲ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಹನುಮಂತಪ್ಪ ಕೌದಿ, ಕೆಂಚಪ್ಪ ಕೊಪ್ಪಳ, ಕಾಮಣ್ಣ ಕಂಬಳಿ ಬಸಾಪುರ, ಹನುಮೇಶ್ ಬಡಿಗೇರ್, ಮನೋಜ್, ದುರುಗಪ್ಪ, ಗೋಣಿಬಸಪ್ಪ, ಗಾಳೆಪ್ಪ, ನಾಗರಾಜ್ ಕೌದಿ, ಪ್ರಾಣೇಶ್ ಹಾಲವರ್ತಿ, ಲಕ್ಷ್ಮಣ ಹರಿಜನ, ವೀರಪ್ಪ ಸುಂಕಪ್ಪ, ಭೀಮೇಶ್ ಬಹದ್ದೂರಬಂಡಿ ಇತರರಿದ್ದರು.