ಸಾರಾಂಶ
ಹೊಲಕ್ಕೆ ಸುವ್ಯವಸ್ಥಿತ ದಾರಿಯಿಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಹೊಲಗಳ ರಸ್ತೆ ಸರಿಪಡಿಸದೇ ರೈತರ ಮನವಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು.
ಧಾರವಾಡ:
ಮಹದಾಯಿ ಜಾರಿ, ರೈತರಿಗೆ ಹೊಲಕ್ಕೆ ಹೋಗಲು ಸುವ್ಯಸ್ಥಿತ ರಸ್ತೆ ಮಾರ್ಗ, ಬರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೃಷಿಕ ಸಮಾಜದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಇಲ್ಲಿಯ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಎತ್ತು-ಚಕ್ಕಡಿ ಸಮೇತ ಪ್ರತಿಭಟನಾ ಮೆರವಣಿಗೆ ಕೈಗೊಂಡ ರೈತರು, ಡಿಸಿ ಕಚೇರಿ ಎದುರೇ ಪ್ರತಿಭಟನಾ ಧರಣಿ ಕೈಗೊಂಡು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಲ್ಲದೇ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ನಿರ್ಲಕ್ಷ್ಯ ನಡೆ ಖಂಡಿಸಲಾಯಿತು.
ಹೊಲಕ್ಕೆ ಸುವ್ಯವಸ್ಥಿತ ದಾರಿಯಿಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಹೊಲಗಳ ರಸ್ತೆ ಸರಿಪಡಿಸದೇ ರೈತರ ಮನವಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಜತೆಗೆ ಈ ಕೂಡಲೇ ಹೊಲದ ದಾರಿಯನ್ನು ಸರಿಮಾಡಿಕೊಡಬೇಕು. ಇನ್ನು ಬೆಳೆ ವಿಮೆ ವಿಷಯದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಜತೆಗೆ ಬೆಳೆ ವಿಮೆ ಮಾರ್ಗಸೂಚಿ ಹಾಗೂ ನಿಬಂಧನೆಗಳನ್ನು ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಯಿತು.ಕಳಸಾ-ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿಗೆ ವನ್ಯ ಜೀವಿಗಳ ಸಂರಕ್ಷಣಾ ಸಮಿತಿ, ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಯೋಜನೆಗೆ ನಿಯೋಜನೆಗೊಳಿಸಿದ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು. ಕಾಳಿ ನದಿಯಿಂದ ಕಲಘಟಗಿ ತಾಲೂಕಿನ ರೈತರ ಹೊಲಗಳಿಗೆ ಹಾಗೂ ಕುಡಿಯುವ ನೀರಿನ ಸಲುವಾಗಿ ನದಿ ಜೋಡಣೆ ಮಾಡುವ ಪ್ರಸ್ತಾವನೆ ಮಾಡಿದ್ದು, ಈ ವರೆಗೂ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ಹೀಗಾಗಿ ಶೀಘ್ರವೇ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಈ ವೇಳೆ ರಾಜ್ಯಾಧ್ಯಕ್ಷ ಮಾಣಿಕ್ಯಾ ಚಿಲ್ಲೂರ, ಪ್ರಧಾನ ಕಾರ್ಯದರ್ಶಿ ಪರಮಾನಂದ ಒಡೆಯರ, ಜಿಲ್ಲಾಧ್ಯಕ್ಷ ಬಸವರಾಜ ತಿಪ್ಪನ್ನವರ, ಶಂಕರಗೌಡ ಭಾವಿಕಟ್ಟಿ, ವಿಜಯಕುಮಾರ ಪಂಚಗಟ್ಟಿ, ಟಿ.ಡಿ. ಪಾಟೀಲ ಸೇರಿದಂತೆ ಹಲವರು ಇದ್ದರು.