ಸಾರಾಂಶ
ಎಲ್ಲ ಪಿಡಿಒ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸಬೇಕು. ಏಳು ವರ್ಷ ಪೂರೈಸಿದವರನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈಬಿಡಬೇಕು.
ಕಾರವಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಯಿತು.
ಎಲ್ಲ ಪಿಡಿಒ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸಬೇಕು. ಏಳು ವರ್ಷ ಪೂರೈಸಿದವರನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈಬಿಡಬೇಕು. ಸ್ವಇಚ್ಛೆ ಇಲ್ಲದೇ ಸಾರ್ವಜನಿಕ ಹಿತಾಸಕ್ತಿ ತೋರದೇ ವರ್ಗಾವಣೆ ಮಾಡಬಾರದು. ವರ್ಗಾವಣೆ ನಿಯಮದಲ್ಲಿ ಬದಲಾವಣೆಗೂ ಮುನ್ನ ಸಂಘದ ಸಲಹೆ ಪಡೆಯಬೇಕು. ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಕ್ರಮವಹಿಸಬೇಕು.ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರಗಂಟಿ, ಜವಾನ, ಸ್ವಚ್ಛತಾಗಾರ ಈ ನೌಕರರಿಗೆ ವೇತನ ಶ್ರೇಣಿ, ಸೇವಾ ಹಿರಿತನದ ವೇತನ ಜಾರಿ ಮಾಡಿ ಕಾರ್ಮಿಕ ಇಲಾಖೆಯ ವೇತನ ಹೊರತುಪಡಿಸಿ ಪಂಚಾಯತ ರಾಜ್ ಇಲಾಖೆಯಿಂದ ವೇತನ ನಿಗದಿಪಡಿಸಿ ನೌಕರರ ಖಾತೆಗೆ ಹಾಕಬೇಕು.
ಗ್ರಾಪಂ ಸಿಬ್ಬಂದಿ ಆರೋಗ್ಯ ವಿಮೆ ೫ ಲಕ್ಷಕ್ಕೆ ಹೆಚ್ಚಿಸಬೇಕು. ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ವೃಂದದಿಂದ ಕಾರ್ಯದರ್ಶಿ ಗ್ರೇಡ್ ೨, ಎಸ್‌ಡಿಎಎ ಹುದ್ದೆಗಳಿಗೆ ಸರ್ಕಾರದಿಂದ ಸೇವೆ ಒಳಗಿನ ನೇರ ನೇಮಕಾತಿ ಮಾಡುತ್ತಿದ್ದು, ನೇರ ನೇಮಕಾತಿ ಪದವನ್ನು ಬಿಟ್ಟು ಮುಂಬಡ್ತಿ ಎಂಬ ಪದವನ್ನು ಸೇರಿಸಿ ಆದೇಶ ಮಾಡಬೇಕು ಎಂದು ಒತ್ತಾಯಿಸಲಾಗಿದೆ.ಗ್ರೇಡ್ ೧ ಕಾರ್ಯದರ್ಶಿಗಳ ವೃಂದದ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟ ಮಾಡಿ ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡುವ ಬಗ್ಗೆ ಆದೇಶವಿದ್ದರೂ ನಿರಾಸಕ್ತಿ ತೋರುತ್ತಿದ್ದು, ಕಾಲಮಿತಿಯೊಳಗೆ ಮುಂಬಡ್ತಿ ನೀಡಲು ಕ್ರಮ ವಹಿಸಬೇಕು. ೭ ವರ್ಷದಿಂದ ಒಂದೇ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವವರನ್ನು ಬೇರೆ ಜಿಲ್ಲೆ, ತಾಲೂಕಿಗೆ ವರ್ಗಾಯಿಸುವ ಕರಡು ಸೂಚನೆ ಹಿಂಪಡೆಯಬೇಕು.
ಗ್ರೇಡ್ ೨ ಕಾರ್ಯದರ್ಶಿಯಿಂದ ಗ್ರೇಡ್ ೧ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಶೇ. ೩೩ರಷ್ಟಿದ್ದು, ಅದನ್ನು ಶೇ. ೮೦ಕ್ಕೆ ಹೆಚ್ಚಿಸಬೇಕು. ಗ್ರೇಡ್ ೨ ಕಾರ್ಯದರ್ಶಿ ಕರ ವಸೂಲಿ ಮಾಡಿದ ಸರ್ವಿಸಿಸ್‌ನ ೨೩೫ ಆದೇಶದ ಪ್ರಕಾರ ಹಳೆ ಪಿಂಚಣಿ ಯೋಜನೆ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು.