ಮಿನಿವಿಧಾನಸೌಧ ಮುಂದೆ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
KannadaprabhaNewsNetwork | Published : Oct 14 2023, 01:00 AM IST
ಮಿನಿವಿಧಾನಸೌಧ ಮುಂದೆ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
ಸಾರಾಂಶ
ಮಿನಿವಿಧಾನಸೌಧ ಮುಂದೆ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
ಶೈಕ್ಷಣಿಕ ವರ್ಷವಿಡೀ ಕಾರ್ಯ, ವೇತನ ನೀಡುವಂತೆ ಒತ್ತಾಯ । ಸಿಎಂಗೆ ಮನವಿ ರವಾನೆ ಕನ್ನಡಪ್ರಭ ವಾರ್ತೆ ಸಿಂಧನೂರು ಅತಿಥಿ ಉಪನ್ಯಾಸಕರಿಗೆ ಶೈಕ್ಷಣಿಕ ವರ್ಷವಿಡೀ ಕಾರ್ಯ, ವೇತನ ಮತ್ತು ಸೇವಾ ಖಾಯಮ್ಮಾತಿಯನ್ನು ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇರ್ಜುಗಳ ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಘಟಕ ಗುರುವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟಿಸಿತು. ರಾಜ್ಯದಲ್ಲಿ 410ಕ್ಕೂ ಅಧಿಕ ಪದವಿ ಕಾಲೇಜುಗಳಲ್ಲಿ 14 ಸಾವಿರಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಆನ್ಲೈನ್ ಕೌನ್ಸಲಿಂಗ್ ಮೂಲಕ ಆಯ್ಕೆ ಮಾಡಿಕೊಂಡು ವರ್ಷದಲ್ಲಿ 10 ತಿಂಗಳು ಸೇವೆಗೆ ಬಳಸಿಕೊಂಡು ನಂತರ ಬಿಡುಗಡೆ ಮಾಡುತ್ತಿದ್ದರು. ಆದರೆ ಈ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆ ಮಾಡಿಕೊಂಡು ಕರ್ತವ್ಯಕ್ಕೆ ಹಾಜರು ಪಡಿಸಿಕೊಂಡರೂ ಸಂಬಳ ಇಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಬೇರಿಗಿ ಆಪಾದಿಸಿದರು. ಹಿರಿಯ ಉಪನ್ಯಾಸಕ ಚಂದ್ರಶೇಖರ ಗೊರಬಾಳ ಮಾತನಾಡಿ, ಈ ಹಿಂದಿನ ಸಾಲಿನಂತೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು. ಸೇವಾ ಖಾಯಮಾತಿ ಮಾಡಬೇಕು. ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಬಾಕಿ ವೇತನ, ಆರೋಗ್ಯ ವಿಮೆ, ಭವಿಷ್ಯ ನಿಧಿ, ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ರಜೆ ಹಾಗೂ ವೇತನ ನೀಡಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಗೋನಾಳ ಮನವಿ ಪತ್ರ ಓದಿ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಅವರ ಮೂಲಕ ಮುಖ್ಯಮಂತ್ರಿಗೆ ರವಾನಿಸಿದರು. ನಾರಾಯಣ ಬೆಳಗುರ್ಕಿ ಮಾತನಾಡಿದರು. ಗೌರವಾಧ್ಯಕ್ಷ ಡಾ.ಮರಿಲಿಂಗಪ್ಪ, ಉಪಾಧ್ಯಕ್ಷ ಡಾ.ಮದಗಪ್ಪ, ಸದಸ್ಯರಾದ ಸಿದ್ದರಾಮೇಶ ಮುಕ್ಕುಂದಾ, ಬಸವರಾಜ ಪಿ.ನಾಯಕ, ಶಂಕರ ಗುರಿಕಾರ, ಪರಶುರಾಮ ಮಲ್ಲಾಪುರ, ತ್ರಿಕುಮಾರ, ನರಸಣ್ಣ ಬೆಳಗುರ್ಕಿ ಇದ್ದರು. ನಂತರ ಶಾಸಕರ ನಿವಾಸಕ್ಕೆ ತೆರಳಿ ಅವರ ಅನುಪಸ್ಥಿತಿಯಲ್ಲಿ ಅವರ ಸಹಾಯಕರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.