ಸಗಣಿ ನೀರು ಸುರಿದುಕೊಂಡು ಅತಿಥಿ ಉಪನ್ಯಾಸಕರಿಂದ ಧರಣಿ

| Published : Dec 27 2023, 01:32 AM IST

ಸಗಣಿ ನೀರು ಸುರಿದುಕೊಂಡು ಅತಿಥಿ ಉಪನ್ಯಾಸಕರಿಂದ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕ ಧರಣಿ 37 ನೇ ದಿನಕ್ಕೆ ಕಾಲಿರಿಸಿದೆ, ಅದರ ಮುಂದುವರೆದ ಭಾಗವಾಗಿ ಜಿಲ್ಲಾಡಳಿತ ಎದುರುಗಡೆ ಇಂದು ಜಿಲ್ಲಾಧ್ಯಕ್ಷ ಮುನಿರಾಜು ಮೈಮೇಲೆ ಸಗಣಿ ನೀರು ಸುರಿದುಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾಯಮಾತಿಗಾಗಿ ಒತ್ತಾಯಿಸಿ 34ನೇ ದಿನದತ್ತ ಸಾಗಿದ ಹೋರಾಟ । ಕಾಯಗೊಳಿಸದಿದ್ದರೆ ದಯಾ ಮರಣ ಕರುಣಿಸಿ: ಮುನಿರಾಜು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅತಿಥಿ ಉಪನ್ಯಾಸಕರು ಮೈಮೇಲೆ ಸಗಣಿನೀರು ಸುರಿದುಕೊಂಡು ಕಾಯಮಾತಿಗಾಗಿ ಸರಕಾರವನ್ನು ಆಗ್ರಹಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಡೆದ 34ನೇ ದಿನದ ಹೋರಾಟದ ಭಾಗವಾಗಿ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು.ಎಂ.ಅರಿಕೆರೆ ತಮ್ಮ ಮೈಮೇಲೆ ಸಗಣಿ ನೀರನ್ನು ಸುರಿದುಕೊಂಡು ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಮುನಿರಾಜು.ಎಂ.ಅರಿಕೆರೆ ಮಾತನಾಡಿ, ನ್ಯಾಯಯುತ ಬೇಡಿಕೆಗಾಗಿ 34 ದಿನಗಳ ಕಾಲ ನಿರಂತರವಾಗಿ ರಾಜ್ಯದೆಲ್ಲೆಡೆ ತರಗತಿ ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದೇವೆ. ಆದರೂ ಸಹ ಸರ್ಕಾರ ನಮ್ಮತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಹೀಗಾಗಿಯೇ ಸರ್ಕಾರದ ಕಣ್ತೆರೆಸುವ ಉದ್ದೇಶದಿಂದ ಸಗಣಿ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟನೆ ದಾಖಲಿಸಿದ್ದೇವೆ ಎಂದರು.

ದಯಾಮರಣ ನೀಡಲಿ

ನಮ್ಮದು ಎರಡು ದಶಕಗಳ ಹೋರಾಟವಾಗಿದೆ. ಈ ಅವಧಿಯಲ್ಲಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ವೇತನ ಸಾಲದೆ, ಸಂಸಾರ ನಡೆಸಲಾಗದೆ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಸರಕಾರ ನಮ್ಮನ್ನು ಅತಿಥಿ ಪದನಾಮದ ಅಡಿಯಲ್ಲಿ ಕನಿಷ್ಠ ಗೌರವ ಧನ ನೀಡಿ ಜೀತಗಾರರಿಗಿಂತಲೂ ಕಡೆಯಾಗಿ ನಡೆಸಿಕೊಂಡಿದೆ. ಆದರೂ ನಾವು ಉನ್ನತ ಶಿಕ್ಷಣದ ಘನತೆ ಗೌರವ ಎತ್ತಿ ಹಿಡಿಯುತ್ತಾ, ನ್ಯಾಯಯುತ ಬೇಡಿಕೆ ಈಡೇರಿಸಿ ಎಂದು ಸರಕಾರದ ಮುಂದೆ ಅಂಗಲಾಚುತ್ತಿದ್ದೇವೆ. ಯಾರೂ ನಮ್ಮ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಿಲ್ಲ. ಇನ್ನಾದರೂ ಮುಖ್ಯಮಂತ್ರಿಯವರು ಇತ್ತ ಗಮನ ಹರಿಸುವರೋ, ಇಲ್ಲವೋ ಕಾದು ನೋಡಬೇಕಿದೆ. ಸರ್ಕಾರ ಕಾಯಂಮಾತಿ ಮಾಡಲಾಗದಿದ್ದರೆ ದಯಾಮರಣದ ಭಿಕ್ಷೆ ನೀಡಲಿ ಎಂದು ನೊಂದು ನುಡಿದರು.

ಉನ್ನತ ಶಿಕ್ಷಣ ಸಚಿವರು ನಮ್ಮ ಜಿಲ್ಲೆಯವರೇ ಆದರೂ ಸಮಸ್ಯೆ ಬಗೆಹರಿಸದೆ ಜೀವಂತವಾಗಿ ಇಟ್ಟುಕೊಂಡಿರುವುದೇ ಹೋರಾಟ ಮುಂದುವರೆಯಲು ಕಾರಣವಾಗಿದೆ. ಇನ್ನಾದರೂ ಸರ್ಕಾರ ಇತ್ತ ಕಾಳಜಿ ತೋರಿಸುತ್ತದೆಯೋ, ಇಲ್ಲವೋ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟರಮಣ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಉಪಾಧ್ಯಕ್ಷ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಜಯಚಂದ್ರ, ರಾಮಚಂದ್ರ, ಗಗನ್, ಗಂಗಾಧರ್, ಖಜಾಂಚಿ ರಾಜಶೇಖರ, ಗುಡಿಬಂಡೆ ತಾಲೂಕು ಅಧ್ಯಕ್ಷ ಓಬಳರೆಡ್ಡಿ, ಚಿಂತಾಮಣಿ ತಾಲೂಕಿನ ಜೋಸೆಫ್, ಮಂಜುನಾಥರೆಡ್ಡಿ, ಹರೀಶ್, ಸತ್ಯನಾರಾಯಣ, ಶ್ರೀನಿವಾಸ್, ಗಂಗಾಧರ್ ಹೊಸಹಳ್ಳಿ, ಹರೀಶ್, ಡಾ.ವೆಂಕಟೇಶ್, ಮಂಜುನಾಥ್ ಮತ್ತಿತರರು ಇದ್ದರು.