ಸಾರಾಂಶ
ಹಾವೇರಿ: ಅಕ್ರಮವಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ರಾಣಿಬೆನ್ನೂರು ತಾಲೂಕಿನ ಸಂತ್ರಸ್ತ ಮಹಿಳೆಯರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಮಂಗಳವಾರ ನಡೆಯಿತು.ತಮ್ಮ ಅಹವಾಲು ಸ್ವೀಕರಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರೇ ಬರಬೇಕೆಂದು ಪಟ್ಟು ಹಿಡಿದರು. ಮುತ್ತಿಗೆ ಹಾಕಲು ಬಂದ ಮಹಿಳೆಯರನ್ನು ಪೊಲೀಸರು ಗೇಟ್ ಬಳಿ ತಡೆದರು. ಸಂತ್ರಸ್ತ ಮಹಿಳೆಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದು, ಒಂದು ಹಂತದಲ್ಲಿ ಮಹಿಳೆಯರು ಕೈಯಲ್ಲಿ ಕಲ್ಲು ಹಿಡಿದು ನಿಂತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪ್ರತಿಭಟನಾಕಾರರ ಪರವಾಗಿ ಮಾಧ್ಯಮಗಳ ಜತೆಗೆ ಮಾತನಾಡಿದ ಲಲಿತಮ್ಮ, ಅನಧಿಕೃತವಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ನೂರಾರು ಮಹಿಳೆಯರು ರಾಣಿಬೆನ್ನೂರ ತಾಲೂಕಿನಲ್ಲಿ ಇದ್ದಾರೆ. ಕಳೆದ ೯ ವರ್ಷಗಳಿಂದ ಈ ಕುರಿತು ಹೋರಾಟ ಮಾಡುತ್ತಿದ್ದರೂ ಅದಕ್ಕೆ ಯಾವುದೇ ಸರ್ಕಾರಗಳು ಸ್ಪಂದಿಸಿಲ್ಲ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರೂ, ಪೊಲೀಸರು ಸ್ಪಂದಿಸದೇ ನಮ್ಮನ್ನು ದೂರ ಇಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.ನಮ್ಮನ್ನು ಬಂಧಿಸಿ, ಇಲ್ಲವೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಅನುಮತಿ ನೀಡಿ. ಪ್ರತಿಭಟನಾ ನಿರತ ಮಹಿಳೆಯರನ್ನು ಮೈ ಕೈ ಮುಟ್ಟಿ ತಳ್ಳಾಡಿದ್ದಾರೆ ಎಂದು ಆರೋಪಿಸಿದ ಮಹಿಳೆಯರು ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಸಚಿವರ ಭೇಟಿಯಾಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.ಮಹಿಳೆಯರ ಪ್ರತಿಭಟನೆ ವಿಷಯ ತಿಳಿದು ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನಮೂರ್ತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಹಿಳೆಯರ ಮನವಿ ಆಲಿಸಿದರು. ಆಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ, ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕೊಡುವ ಪ್ರಯತ್ನ ಮಾಡುವ ಭರವಸೆ ನೀಡಿದರು. ಸಚಿವರ ಭರವಸೆ ಮೇರೆಗೆ ಮಹಿಳೆಯರು ಪ್ರತಿಭಟನೆಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಮಂಜುಳಾ, ಯಲ್ಲವ್ವ, ಅನಸೂಯಾ, ದುರುಗವ್ವ, ಲಕ್ಷ್ಮವ್ವ, ಪೀರವ್ವ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.