ಹಕ್ಕು ಪತ್ರಕ್ಕಾಗಿ ತಾಪಂಗೆ ಬೀಗ ಜಡಿದು ಪ್ರತಿಭಟನೆ

| Published : Feb 25 2024, 01:48 AM IST

ಸಾರಾಂಶ

ಇದೇ ರೀತಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು

ರಟ್ಟೀಹಳ್ಳಿ: ಹಿರೇಮೊರಬ ಗ್ರಾಪಂ ವ್ಯಾಪ್ತಿಯ ಖಂಡೇಬಾಗೂರ ಗ್ರಾಮದ ಗೌಠಾಣ ಜಾಗೆಯಲ್ಲಿ ವಾಸಿಸುತ್ತಿರುವ 30 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ವಿಳಂಬ ನೀತಿ ಖಂಡಿಸಿ ಫಲಾನುಭವಿಗಳು ರಟ್ಟಿಹಳ್ಳಿ ತಾಪಂಗೆ ಬೀಗ್‌ ಜಡಿದು ದೀಢಿರ್‌ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫಲಾನುಭವಿ ಆಂಜನೇಯ ದೊಡ್ಡಮನಿ, ಹಿರೇಮೊರಬ ಗ್ರಾಪಂ ವ್ಯಾಪ್ತಿಯ ಖಂಡೇಬಾಗೂರ ಪ್ಲಾಟ್‌ನ ಸರ್ವೇ ನಂ.೨೫/ಬ೧.ರ ೩ ಎಕರೆ ೧೯ ಗುಂಟೆ ಜಮೀನು ಮೊದಲು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿತ್ತು ಈ ಭೂಮಿಯನ್ನು ೧೯೬೧ ರಲ್ಲಿ ಡಿನೋಟಿಫಿಕೇಷನ್ ಮಾಡಿ ನಿವೇಶನಕ್ಕೆ ಮಂಜೂರು ಮಾಡಿದ್ದರೂ ೨೦೧೨ ರಿಂದ ಹಕ್ಕು ಪತ್ರ ನೀಡಲೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಆದ್ದರಿಂದ ತಾಪಂಗೆ ಬೀಗ ಜಡಿದು ಪ್ರತಿಭಟನೆ ಕೈಗೊಳ್ಳಲಾಯಿತು. ಇದೇ ರೀತಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಭರತಗೌಡ ಪಾಟೀಲ, ತಿಮ್ಮನಗೌಡ ಪಾಟೀಲ, ಚನ್ನಗೌಡ ಸಿದ್ದವ್ವನವರ, ಸಣ್ಣಗೌಡ ಪಾಟೀಲ, ಮಾರುತಿ ಲಮಾಣಿ, ಅರ್ಜುನ ಲಮಾಣಿ, ಮಲ್ಲೇಶ ದ್ಯಾವನಕಟ್ಟಿ, ಗಂಗಮ್ಮ ಮಾಳಮ್ಮ ಮೂಗದೂರ, ನಿರ್ಮಲಾ ಲಮಾಣಿ, ನಾಗವ್ವ ದ್ಯಾವಣ್ಣನವರ, ಈರಪ್ಪ ಬಣಕಾರ ಮುಂತಾದವರು ಇದ್ದರು.