ಸಂಗೂರ ಸಕ್ಕರೆ ಕಾರ್ಖಾನೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ

| Published : Feb 08 2024, 01:33 AM IST

ಸಾರಾಂಶ

ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ತಾಲೂಕಿನ ಸಂಗೂರ ಸಕ್ಕರೆ ಕಾರ್ಖಾನೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯ

ಕನ್ನಡಪ್ರಭ ವಾರ್ತೆ ಹಾವೇರಿ

ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದಿಂದ ಬುಧವಾರ ತಾಲೂಕಿನ ಸಂಗೂರ ಸಕ್ಕರೆ ಕಾರ್ಖಾನೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಸಂಗೂರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರು ಸಕ್ಕರೆ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು, ಬಾಕಿ ಬಿಲ್ ಪಾವತಿಸುವ ತನಕ ಕಾರ್ಖಾನೆಯಿಂದ ಲಾರಿಗಳನ್ನು ಹೊರಗಡೆ ಬಿಡುವುದಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಬ್ಬು ಬೆಳೆಗಾರರ ಸಂಘ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಕಬ್ಬು ಸಾಗಿಸಿ ಎರಡು ಕಳೆದರೂ ಕಾರ್ಖಾನೆ ಮಾಲೀಕರು ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿ ಮಾಡದೇ ಸತಾಯಿಸುತ್ತಿದ್ದಾರೆ. ಜಿಎಂ ಶುಗರ್ಸ್ ಒಡೆತನದಲ್ಲಿ ನಡೆಯುತ್ತಿರುವ ಈ ಕಾರ್ಖಾನೆ ಕಬ್ಬು ಸಾಗಿಸಿದ ರೈತರಿಗೆ ನೀಡಬೇಕಾದ ₹೫೦ ಕೋಟಿಗೂ ಹೆಚ್ಚಿನ ಹಣ ಬಾಕಿ ಇಟ್ಟುಕೊಂಡಿದೆ. ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಬರಗಾಲ ಎದುರಾಗಿದ್ದು ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಪೂರೈಸಿದ ಕಬ್ಬಿಗೆ ಕಾರ್ಖಾನೆ ಮಾಲೀಕರು ನಿಗದಿತ ಅವಧಿ ಒಳಗಾಗಿ ಹಣ ಪಾವತಿ ಮಾಡದೇ ರೈತರನ್ನು ಮತ್ತೊಷ್ಟು ಸಂಕಷ್ಟಕ್ಕೆ ತುತ್ತಾಗುವಂತೆ ಮಾಡುತ್ತಿದ್ದಾರೆ. ಕೂಡಲೇ ರೈತರಿಗೆ ಬಾಕಿ ಹಣ ಪಾವತಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕಾರ್ಖಾನೆಯ ಮಾಲೀಕರು ಆಗಮಿಸಬೇಕು ಎಂದು ರೈತರು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದು, ಹಣ ಹಾಕದಿದ್ದರೆ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ರೈತರ ಪ್ರತಿಭಟನೆ ಹಿನ್ನೆಲೆ ಕಾರ್ಖಾನೆಗೆ ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಪ್ರಮುಖರಾದ ನಾಗರಾಜ ಕೋಡಿಬಸನಗೌಡ್ರ, ಸಿದ್ದರಾಮಗೌಡ ಕರೇಗೌಡ್ರ, ಗುರುನಂಜಪ್ಪ ಚಂದ್ರಗಿರಿ, ಖಾಜಾಮೈನೂದ್ದೀನ್ ಬಂಕಾಪೂರ, ಶ್ರೀಕಾಂತ ನರೇಗಲ್ಲ, ಮಾಲತೇಶ ಆಲದಕಟ್ಟಿ, ರೇವಣಪ್ಪ ಪರಪ್ಪನವರ ಇತರರಿದ್ದರು.