ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ತಾಳಿಕೋಟೆ ತಾಲೂಕ ನಿಜಶರಣ ಅಂಬಿಗೇರ ಚೌಡಯ್ಯ ಸಮಾಜ ಕ್ಷೇಮಾಭಿವೃದ್ದಿ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಮಾತನಾಡಿ, ನೇಹಾ ಹಿರೇಮಠ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಯುವತಿಯ ಹತ್ಯೆ ನಡೆದಿದೆ. ಇದು ಖಂಡನೀಯವಾಗಿದ್ದು, ಸರ್ಕಾರ ಕ್ರೂರವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕರ್ನಾಟಕಕ್ಕೂ ಯೋಗಿ ಅಂತಹ ಮುಖ್ಯಮಂತ್ರಿ ಬಂದರೆ ಎಲ್ಲವೂ ಸರಿಹೋಗಲಿದೆ. ಇಂತಹ ಘಟನೆಗಳು ಮರುಕಳಿಸಬಾರದೆಂದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿಗಳ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಲ್ಲದೇ, ಅಂಜಲಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಗುಂಡಕನಾಳ ಹಿರೇಮಠ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸರ್ಕಾರದ ಬೇಜವಾಬ್ದಾರಿಯಿಂದ ನಿತ್ಯ ಕೊಲೆ, ಸುಲಿಗೆಗಳು ನಡೆಯುತ್ತಿವೆ. ನೇಹಾ ಹತ್ಯೆ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ಕೊಲೆ ಆರೋಪಿಗಳನ್ನುಎನ್‌ಕೌಂಟರ್ ಮಾಡಬೇಕು, ಇಲ್ಲವೇ ವಿಶೇಷ ಕಾನೂನಿನಡಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ನಿಜಶರಣ ಅಂಬಿಗೇರ ಚೌಡಯ್ಯ ಸಮಾಜ ಕ್ಷೇಮಾಭಿವೃದ್ದಿ ಸಂಘದ ತಾಳಿಕೋಟೆ ತಾಲೂಕಾಧ್ಯಕ್ಷ ಪರಶುರಾಮ ತಂಗಡಗಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಅಂಜಲಿ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಮಹಿಳೆಯರ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಅಮರಣ್ಣ ಕಾಮನಕೇರಿ, ಕರವೇ ಸಂಘಟನೆ ಜೈಭೀಮ ಮುತ್ತಗಿ, ಶಿವರಾಜ ಗುಂಡಕನಾಳ ಮಾತನಾಡಿದರು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಿದರು. ಈ ವೇಳೆ ಎಂ.ಎಚ್.ಜೂಲಿ, ಎನ್.ಎಸ್.ಬಳಿಗಾರ, ವಿಠ್ಠಲ ಮೋಹಿತೆ, ಎಂ.ಡಿ.ನಾಯ್ಕೋಡಿ, ಎಂ.ಎಸ್.ಮದ್ದರಕಿ, ಬಿ.ಎಲ್.ತಳವಾರ, ಚಂದ್ರು ಗೊರಗುಂಡಗಿ, ಆರ್.ಎಸ್.ಬೂದಿಹಾಳ, ರಾಜು ಸಜ್ಜನ, ರಾಘವೇಂದ್ರ ಮಾನೆ, ಮಾನಸಿಂಗ್ ಕೊಕಟನೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ನೀಲಮ್ಮ ಪಾಟೀಲ, ಸಿದ್ದು ಯಾಳವಾರ, ರಾಘು ಬಾಕಲಿ, ಶಶಿ ಮೂಕೀಹಾಳ, ಸಿದ್ದಾರಾಮಪ್ಪ ಮದ್ದರಕಿ, ರವಿ ಯಳಮೇಲಿ, ಶರಣು ಕಲ್ಲೂರ, ಶರಣಪ್ಪ ಚಳ್ಳಗಿ, ರಾಘವೇಂದ್ರ ಬಿಜಾಪೂರ, ಸುವರ್ಣ ಬಿರಾದಾರ, ರಾಘವೇಂದ್ರ ಚವ್ಹಾಣ, ಫಯಾಜ ಉತ್ನಾಳ, ಜೈಸಿಂಗ್ ಮೂಲಿಮನಿ, ಮುತ್ತು ಕಶೆಟ್ಟಿ, ಆರ್.ಎಲ್.ಕೊಪ್ಪದ, ಮಂಜು ಶೆಟ್ಟಿ, ಮುದಕಣ್ಣ ಬಡಿಗೇರ, ರವಿ ಕಟ್ಟಿಮನಿ ಹಲವರು ಭಾಗವಹಿಸಿದ್ದರು.