ಸಾರಾಂಶ
ಈ ರಸ್ತೆ ಗುಂಡಿ ಬಿದ್ದು ಸುಮಾರು ವರ್ಷಗಳು ಕಳೆದಿವೆ, ತಾತ್ಕಾಲಿಕವಾಗಿ ತೇಪೆ ಹಾಕಿ ಮುಚ್ಚುವ ಕೆಲಸ ಮಾಡುತ್ತಾರೆ ಹೊರತು, ಶಾಶ್ವತ ಪರಿಹಾರ ಇಲ್ಲಿವರೆಗೂ ಮಾಡಿಲ್ಲ. ಈ ಜಾಗದಲ್ಲಿ ಸಾಕಷ್ಟು ಅಪಘಾತಗಳು ನಡೆದಿದ್ದು, ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ. ಇಲ್ಲಿಯ ಶಾಸಕರು ತಾಲೂಕು ಪೂರ್ಣ ಅಭಿವೃದ್ಧಿ ಆಗಿದೆ ಎಂದು ನೆಪ ಹೇಳುತ್ತಾರೆ ಹೊರತು, ಯಾವುದೇ ರೀತಿಯ ಕೆಲಸ- ಕಾರ್ಯಗಳಾಗಿಲ್ಲ.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಗೆಂಡೇಹಳ್ಳಿ ಮಾರ್ಗದ ಕಳಸಿನಕೆರೆ ಏರಿ ಮೇಲಿನ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು , ಸರಿಪಡಿಸುವಲ್ಲಿ ಪಿಡಬ್ಲ್ಯೂಡಿ ಇಲಾಖೆ ವಿಫಲವಾಗಿದೆ ಎಂದು ರಸ್ತೆಯ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಕರವೇ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಪ್ರವೀಣ್ ಶೆಟ್ಟಿ ಬಣದ ಕರವೇ ಅಧ್ಯಕ್ಷ ವಿ. ಎಸ್. ಭೋಜೇಗೌಡ, ಪಟ್ಟಣದ ಗೆಂಡೇಗಳ್ಳಿ ರಸ್ತೆಯ ಮಾರ್ಗದ ಕಳಸಿನಕೆರೆ ಬಳಿಯ ರಸ್ತೆ ಗುಂಡಿಬಿದ್ದು ಸಾಕಷ್ಟು ತೊಂದರೆಯಾಗಿದ್ದು, ವಾಹನ ಸವಾರರು ರಸ್ತೆಯ ಮಾರ್ಗದಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.
ಗೆಂಡೇಹಳ್ಳಿಗೆ ಹೋಗುವ ಮಾರ್ಗದ ರಸ್ತೆ ಎಷ್ಟು ಹದಗೆಟ್ಟಿದೆ ಎಂದರೆ ಇಲ್ಲಿ ಬಾಳೆ ಗಿಡಗಳನ್ನು ನೆಟ್ಟು ಬೆಳೆ ಬೆಳೆಯುವಷ್ಟು ಕೆಸರು ಗದ್ದೆಯಾಗಿದೆ. ಗುಂಡಿಗಳ ತುಂಬೆಲ್ಲಾ ನೀರು ತುಂಬಿಕೊಂಡಿದ್ದು, ವಾಹನ ಸವಾರರಿಗೆ ಗುಂಡಿ ಯಾವುದು, ಸಮತಟ್ಟು ನೆಲ ಯಾವುದು ತಿಳಿಯದೇ ಹೊಂಡದಲ್ಲಿ ಬೀಳುತ್ತಿದ್ದಾರೆ. ಸಾಕಷ್ಟು ತೊಂದರೆಯಾಗಿದೆ . ಮಳೆಗಾಲದಲ್ಲಂತೂ ಜಲಾವೃತ ಪ್ರದೇಶದಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.ರಸ್ತೆ ನಿರ್ವಹಣೆಯ ಜವಾಬ್ದಾರಿಯಲ್ಲಿ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಶಾಸಕರು, ಸ್ಥಳೀಯ ಆಡಳಿತಾಧಿಕಾರಿಗಳು ಈ ಕೂಡಲೇ ಸರ್ಕಾರದ ಗಮನ ಸೆಳೆದು ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಮಾತನಾಡಿ, ಈ ರಸ್ತೆ ಗುಂಡಿ ಬಿದ್ದು ಸುಮಾರು ವರ್ಷಗಳು ಕಳೆದಿವೆ, ತಾತ್ಕಾಲಿಕವಾಗಿ ತೇಪೆ ಹಾಕಿ ಮುಚ್ಚುವ ಕೆಲಸ ಮಾಡುತ್ತಾರೆ ಹೊರತು, ಶಾಶ್ವತ ಪರಿಹಾರ ಇಲ್ಲಿವರೆಗೂ ಮಾಡಿಲ್ಲ. ಈ ಜಾಗದಲ್ಲಿ ಸಾಕಷ್ಟು ಅಪಘಾತಗಳು ನಡೆದಿದ್ದು, ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ. ಇಲ್ಲಿಯ ಶಾಸಕರು ತಾಲೂಕು ಪೂರ್ಣ ಅಭಿವೃದ್ಧಿ ಆಗಿದೆ ಎಂದು ನೆಪ ಹೇಳುತ್ತಾರೆ ಹೊರತು, ಯಾವುದೇ ರೀತಿಯ ಕೆಲಸ- ಕಾರ್ಯಗಳಾಗಿಲ್ಲ, ಕಣ್ಣಿಗೆ ಕಾಣುವ ಇಂತಹ ರಸ್ತೆಗಳ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಗುಂಡಿ ಮುಚ್ಚುವ ಕಾರ್ಯ ಮಾಡಲಿ, ಇಲ್ಲದಿದ್ದರೆ ಕರವೇ ವತಿಯಿಂದ ರಸ್ತೆ ಬಂದ್ ಮಾಡಿಸಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.ಉಪಾಧ್ಯಕ್ಷ ಮಂಜು ಆಚಾರ್, ಕಾರ್ಮಿಕ ಘಟಕ ಅಧ್ಯಕ್ಷ ಹುಸೇನ್, ಆಟೋ ಘಟಕ ಅಧ್ಯಕ್ಷ ಲೋಕೇಶ್ ಮಂಜುನಾಥ್ , ಯುವ ಘಟಕದ ಅಧ್ಯಕ್ಷ ಸತೀಶ್, ನವೀನ್ , ರಾಜು, ರಘು, ಕುಮಾರ್ ಇತರರು ಹಾಜರಿದ್ದರು.