ಶಿರಸಿ ನಿಲೇಕಣಿ ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ

| Published : Apr 24 2025, 11:48 PM IST

ಸಾರಾಂಶ

ಶಿರಸಿ ನಗರದ ನಿಲೇಕಣಿ ಭಾಗದಲ್ಲಿ ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕರೊಂದಿಗೆ ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆ ಮಧ್ಯದಲ್ಲಿ ಗಿಡ ನೆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ಶಿರಸಿ: ನಗರದ ನಿಲೇಕಣಿ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯುಂಟಾಗಿದೆ. ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಕಂಪನಿ ತ್ವರಿತಗತಿಯಲ್ಲಿ ರಸ್ತೆ ನಿರ್ಮಿಸಿ, ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕರೊಂದಿಗೆ ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆ ಮಧ್ಯದಲ್ಲಿ ಗಿಡ ನೆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ಶಿರಸಿ-ಕುಮಟಾ ರಸ್ತೆಯ ನಿಲೇಕಣಿಯ ಹೊಂಡದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ ಪ್ರತಿಭಟನಾಕಾರರು, ಆರ್‌ಎನ್‌ಎಸ್ ಕಂಪನಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಧಿಕ್ಕಾರ ಕೂಗಿದರು.ಸಹಾಯಕ ಆಯುಕ್ತರು ಹಾಗೂ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತ ಹೇಳಿಕೆ ನೀಡಿ, ವಾರದೊಳಗಡೆ ರಸ್ತೆ ದುರಸ್ತಿ ಮಾಡಬೇಕು ಎಂದು ಪಟ್ಟುಹಿಡಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಮಾತನಾಡಿ, ಸಾಗರಮಾಲ ಯೋಜನೆಯಲ್ಲಿ ಆರಂಭವಾದ ಶಿರಸಿ-ಕುಮಟಾ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕಳೆದ ಐದಾರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ನಿಲೇಕಣಿ ಭಾಗದಲ್ಲಿ ರಸ್ತೆ ಸಂಪೂರ್ಣ ಹೊಂಡ-ಗುಂಡಿಗಳಿಂದ ಕೂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಉರುಳು ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತಕ್ಕೆ ಆರ್‌ಎನ್‌ಎಸ್ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇರ ಕಾರಣವಾಗಿದೆ. ರಸ್ತೆಯನ್ನು ಅಗೆದಿರುವುದರಿಂದ ಧೂಳಿನಿಂದ ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ರೋಗ ಅಂಟಿಕೊಂಡಿದೆ. ತಕ್ಷಣ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಮೊಟಕುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಉಪ ತಹಸೀಲ್ದಾರ್‌ ಡಿ.ಆರ್. ಬೆಳ್ಳಿಮನೆ ಸ್ಥಳಕ್ಕಾಗಮಿಸಿ, ತಾತ್ಕಾಲಿಕ ರಸ್ತೆ ದುರಸ್ತಿ ಮಾಡುವಂತೆ ಆರ್‌ಎನ್‌ಎಸ್ ಕಂಪನಿಗೆ ಸೂಚನೆ ನೀಡುವಂತೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಆರ್‌ಎನ್‌ಎಸ್ ಕಂಪನಿಯ ಎಂಜಿನಿಯರ್‌ ಆಗಮಿಸಿ, ಕಂದಾಯ ಇಲಾಖೆಯಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಸಮಸ್ಯೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿದ್ದೇವೆ. ನಗರಸಭೆಯ ಕುಡಿಯುವ ನೀರು ಪೂರೈಕೆಯ ಪೈಪ್ ಸ್ಥಳಾಂತರಗೊಂಡ ಬಳಿಕ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸುತ್ತೇವೆ ಎಂದರು. ಆಗ ಆಕ್ರೋಶಗೊಂಡ ಪ್ರತಿಭಟನಾಕಾರರು, ಅದಕ್ಕೆ ಅವಕಾಶವಿಲ್ಲ. ಒಂದು ವಾರದೊಳಗೆ ತಾತ್ಕಾಲಿಕವಾಗಿ ಡಾಂಬರ್ ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಆಗ ಎಂಜಿನಿಯರ್‌, ಡಾಂಬರ್ ರಸ್ತೆ ನಿರ್ಮಿಸಲಾಗುತ್ತದೆ. ನಂತರ ಪೈಪ್ ಸ್ಥಳಾಂತರಿಸಿ, ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಎಸ್.ಕೆ. ಭಾಗ್ವತ್, ಶ್ರೀನಿವಾಸ ನಾಯ್ಕ, ಪ್ರಸನ್ನ ಶೆಟ್ಟಿ, ರಘು ಕಾನಡೆ, ಎಂ.ಎಲ್. ನಾಯ್ಕ ಮತ್ತಿತರರು ಇದ್ದರು.ಪರದಾಡಿದ ಸಾರ್ವಜನಿಕರು: ನಿಲೇಕಣಿಯಲ್ಲಿ ರಸ್ತೆ ತಡೆದು ಪ್ರತಿಭಟಿಸಿದ ಹಿನ್ನೆಲೆ ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ಗಳು ಸೇರಿದಂತೆ ಇನ್ನಿತ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಸುಮಾರು ೧ ತಾಸಿಗಿಂತಲೂ ಹೆಚ್ಚಿನ ಸಮಯ ರಸ್ತೆ ತಡೆಯಾಗಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತು ವಾಹನ ದಟ್ಟಣೆ ಉಂಟಾಗಿತ್ತು. ಆಸ್ಪತ್ರೆಗೆ ಮತ್ತು ದೂರದ ಊರುಗಳಿಗೆ ತೆರಳುವವರು ರಸ್ತೆಯಲ್ಲಿ ಕಾದು ಕಾದು ಸುಸ್ತಾಗಿ, ಪ್ರತಿಭಟನಾಕಾರರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದವೂ ನಡೆಯಿತು. ಅಧಿಕಾರಿಗಳ ಆಶ್ವಾಸನೆಯ ನಂತರ ಪ್ರತಿಭಟನೆ ಮೊಟಕುಗೊಳಿಸಲಾಯಿತು.

ಮುಜುಗರಕ್ಕೀಡಾದ ಪ್ರತಿಭಟನಾಕಾರರು: ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ರಾಜ್ಯ ಸರ್ಕಾರ, ನಗರಸಭೆಯ ಪೈಪ್‌ಲೈನ್ ಮತ್ತು ವಿದ್ಯುತ್ ಕಂಬ ಸ್ಥಳಾಂತರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಅವುಗಳ ಕೆಲಸ ನಡೆಯದೇ ರಸ್ತೆ ನಿರ್ಮಿಸಲು ಸಾಧ್ಯವಿಲ್ಲ. ಅವುಗಳನ್ನು ಶೀಘ್ರವಾಗಿ ತೆರವು ಮಾಡಿದರೆ ರಸ್ತೆ ಕಾಮಗಾರಿಯೂ ಶೀಘ್ರವಾಗಿ ಆರಂಭವಾಗುತ್ತದೆ. ಆಡಳಿತ ಪಕ್ಷದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದಂತಾಗಿದೆ ಎಂದು ಕೆಲವರು ಮಾತನಾಡಿಕೊಂಡರು.