ಭ್ರಷ್ಟ ಅಧಿಕಾರಿಯ ಟೇಬಲ್‌ ಮೇಲೆ ಚಿಲ್ಲರೆ ಸುರಿದು ಪ್ರತಿಭಟನೆ

| Published : Mar 06 2025, 12:31 AM IST

ಸಾರಾಂಶ

ಭ್ರಷ್ಟ ಅಧಿಕಾರಿಯ ಹಣದ ದಾಹಕ್ಕೆ ಬೇಸತ್ತ ರೈತರು ಹಾಗೂ ಸಾರ್ವಜನಿಕರು ಕೆಆರ್‌ ಎಸ್‌ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಚಿಲ್ಲರೆ ಹಣವನ್ನು ಟೇಬಲ್‌ ಮೇಲೆ ಸುರಿದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ ಭ್ರಷ್ಟ ಅಧಿಕಾರಿಯ ಹಣದ ದಾಹಕ್ಕೆ ಬೇಸತ್ತ ರೈತರು ಹಾಗೂ ಸಾರ್ವಜನಿಕರು ಕೆಆರ್‌ ಎಸ್‌ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಚಿಲ್ಲರೆ ಹಣವನ್ನು ಟೇಬಲ್‌ ಮೇಲೆ ಸುರಿದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಇಲ್ಲಿನ ಉಪ ನೋಂದಣಾಧಿಕಾರಿಯಾಗಿರುವ ರಾಘವೇಂದ್ರ ಒಡೆಯರ್‌ ಅವರ ಕಚೇರಿಗೆ ನುಗ್ಗಿದ ರೈತರು, ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭ್ರಷ್ಟ ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಚೇರಿಯಲ್ಲಿದ್ದ ರಾಘವೇಂದ್ರ ಅವರಿಗೆ ಮೈಸೂರು ಪೇಟ ತೊಡಿಸಲು ಮುಂದಾಗುತ್ತಿದ್ದಂತೆ ಹೊರಹೋಗಲು ಯತ್ನಿಸಿದ ಅಧಿಕಾರಿಯನ್ನು ತಡೆಹಿಡಿದ ರೈತರು ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ನೀವೆ ಕಾರಣರಾಗಿದ್ದೀರಿ. ಈಗ ನಮಗೆ ಸರ್ಕಾರಿ ಕೆಲಸವಾಗಬೇಕಿದ್ದು, ಅದಕ್ಕಾಗಿ ನಾವು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದು ತೆಗೆದುಕೊಳ್ಳಿ ಎಂದು ಚಿಲ್ಲರೆ ಹಣವನ್ನು ರಾಘವೇಂದ್ರ ಒಡೆಯರ್ ಟೇಬಲ್‌ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಘವೇಂದ್ರ ಅವರು ಮುಜುಗರಕ್ಕೆ ಒಳಗಾಗಿದ್ದು ಕಂಡು ಬಂತು.ನಂತರ ಹೊರಗಡೆ ಬಂದ ಕಾರ್ಯಕರ್ತರು ಅಧಿಕಾರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿದ ಮಾತನಾಡಿದ ರಾಜ್ಯಕಾರ್ಯದರ್ಶಿ ವಡ್ಡರಳ್ಳಿ ಮಲ್ಲಿಕಾಜುರ್ನಯ್ಯ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಅಕ್ರಮವಾಗಿ ರೈತರ ಜಮೀನುಗಳನ್ನು ನೋಂದಾಯಿಸುತ್ತಿದ್ದು, ಯಾವ ಜನಪ್ರತಿನಿಧಿಗಳು ಕೂಡ ಪ್ರಶ್ನಿಸುತ್ತಿಲ್ಲ. ರಾಘವೇಂದ್ರ ಒಡೆಯರ್ ಚಿಕ್ಕನಾಯಕನಹಳ್ಳಿಗೆ ವರ್ಗವಾಗಿ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿ ತೊಂದರೆ ಕೊಡುತ್ತಿದ್ದು ಇದರಿಂದಾಗಿ ಅನೇಕ ರೈತರು ತಿಪಟೂರು ತುರುವೇಕೆರೆ, ಶಿರಾ ಮುಂತಾದ ಕಡೆಗಳಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ. ಈ ಹಿಂದೆ ಚಿಕ್ಕನಾಯಕನಹಳ್ಳಿ ವಾಸಿ ವೆಂಕಟಪತಯ್ಯನವರ ಮಗನಾದ ಸಿ.ಬಿ. ಮಲ್ಲಿಕಾರ್ಜುನಯ್ಯ ಎಂಬುವರ ಜಮೀನನ್ನು ಅವರ ಗಮನಕ್ಕೆ ತಾರದೇ ಮಧ್ಯವರ್ತಿಗಳಿಂದ ಬೇರೆಯವರಿಗೆ ನೋಂದಣಿ ಮಾಡಿರುತ್ತಾರೆ. ಈ ಬಗ್ಗೆ ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್.ಐ.ಆರ್ ಸಹ ಆಗಿದ್ದು ಬೇಲ್ ಮೇಲೆ ಬಂದು ಇಲ್ಲಿಯೇ ಠಿಕಾಣಿ ಹೂಡಿ ಕರ್ತವ್ಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. ಇದಕ್ಕೂ ಮೊದಲು ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಎತ್ತಿನ ಗಾಡಿಯಲ್ಲಿ ಭ್ರಷ್ಟ ಅಧಿಕಾರಿಗಳ ಭಾವಚಿತ್ರಗಳನ್ನು ಇರಿಸಿ ನೆಹರು ಸರ್ಕಲ್ ನಿಂದ ತಾಲೂಕು ಕಚೇರಿವರೆಗೂ ಕಾಲ್ನಡಿಗೆಯಲ್ಲಿ ತೆರಳಿ ಸಾರ್ವಜನಿಕರಿಂದ ಒಂದು ರುಪಾಯಿಯಂತೆ ಹಣ ಸಂಗ್ರಹಿಸಿದರು.