ಸಾರಾಂಶ
ಅಂಬೇಡ್ಕರ್, ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ, ಸಿ.ಟಿ.ರವಿ ವಿರುದ್ಧ ಪ್ರಗತಿ ಪರ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಕ್ಷಣ ರಾಜೀನಾಮೆ ನೀಡಬೇಕು. ಅದೇ ರೀತಿ ಸಚಿವೆಯನ್ನು ಅವಾಚ್ಯ ಶಬ್ದದಿಂದ ನಿಂದಿಸಿರುವ ಸಿ.ಟಿ.ರವಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಹಾಗೂ ಸಮಾನ ಮನಸ್ಕರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.ಸಂವಿಧಾನದಲ್ಲಿ ದೇಶದ ಎಲ್ಲರಿಗೂ ಸಮಾನ ಅವಕಾಶ, ಸಮಾನ ಅಧಿಕಾರ, ಘನತೆಯ ಬದುಕಿನ ಆಶ್ವಾಸನೆಗಳಿವೆ. ಇದು ಮನುವಾದ ಒಪ್ಪುವ ಆಮಿತ್ ಶಾ ಮತ್ತು ಅವರ ಪಕ್ಷಕ್ಕೆ ಸಹನೀಯವಲ್ಲ. ಹಾಗಾಗಿಯೇ ಅವರು ಸಂವಿಧಾನದ ಅಡಿಯೇ ಕಾರ್ಯನಿರ್ವಹಿಸಬೇಕಾದ ಸಂಸತ್ತಿನಲ್ಲಿಯೇ ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ಸಂವಿಧಾನ ಮತ್ತು ದೇಶದ ಅಸಂಖ್ಯಾತ ದುಡಿಯುವ ಜನರನ್ನು ಅವಮಾನಿಸಿದ್ದಾರೆ. ಅದನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನಡೆಯೂ ವಿವೇಚನಾರಹಿತವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಮತ್ತು ಮಹಿಳೆಯರ ಬಗ್ಗೆ ಒಂದಿನಿತೂ ಗೌರವವಿಲ್ಲದ, ತೋಚಿದ್ದನ್ನು ಮಾತನಾಡುವ ಸಿ.ಟಿ.ರವಿ ಅವರಿಗೆ ಸದನದಲ್ಲಿ ಮುಂದುವರೆಯುವ ನೈತಿಕ ಅಧಿಕಾರವಿಲ್ಲ. ಅವರ ಅನುಚಿತ ನಡವಳಿಕೆಯನ್ನು ಗುರುತರ ಅಪರಾಧವಾಗಿ ಪರಿಗಣಿಸಿ ಮೇಲ್ಮನೆಯ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಡಾ.ವಿಜಯಾ, ಎಸ್.ವರಲಕ್ಷ್ಮೀ, ಬಿ.ಎನ್.ಮಂಜುನಾಥ, ಗೋಪಾಲಕೃಷ್ಣ ಅರಳಹಳ್ಳಿ ಸೇರಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
--------ಫೋಟೋ
ಪ್ರಗತಿಪರ ಸಂಘಟನೆಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಗೃಹ ಸಚಿವ ಅಮಿತ್ ಶಾ, ಶಾಸಕ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ನಡೆಯಿತು.