ಸಾರಾಂಶ
ಬಳ್ಳಾರಿ: ಅವೈಜ್ಞಾನಿಕವಾದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ನೀತಿಯನ್ನು ಹಿಂದಕ್ಕೆ ಪಡೆಯಬೇಕು. ನೌಕರರ ನಿವೃತ್ತಿ ಬಳಿಕ ನೆಮ್ಮದಿ ನೀಡಬೇಕು ಎಂದು ಆಗ್ರಹಿಸಿ ಸೌತ್ ವೆಸ್ಟನ್ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ರೈಲ್ವೆ ನೌಕರರು ನಗರದ ಕೇಂದ್ರೀಯ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ಆರಂಭಿಸಿದ್ದಾರೆ.
ಎನ್‌ಪಿಎಸ್ ನೀತಿಯಲ್ಲಿ ನೌಕರರ ಹಿತ ಕಾಯುವ ಯಾವುದೇ ಹಿತಾಸಕ್ತಿಗಳಿಲ್ಲ. ಬದಲಿಗೆ ನಿವೃತ್ತಿಯ ನಂತರ ನೆಮ್ಮದಿಯ ಜೀವನ ನಡೆಸಬೇಕಾದ ನೌಕರರು ಆತಂಕದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ಯೋಜನೆ ನೌಕರರ ಹಿತ ಕಾಯಲಿದೆ ಎಂಬ ಯಾವುದೇ ಭರವಸೆಯಿಲ್ಲ.
ಎನ್‌ಪಿಎಸ್ ಜಾರಿಯಿಂದ ರೈಲ್ವೆ ನೌಕರರ ಪಿಂಚಣಿ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಈ ಹಿಂದಿನ ಪಿಂಚಣಿ (ಒಪಿಎಸ್) ಪದ್ಧತಿಯಿಂದ ನೌಕರರಿಗೆ ಹೆಚ್ಚು ಅನುಕೂಲಕರವಾಗಿದೆ. ಕೇಂದ್ರ ಸರ್ಕಾರಕ್ಕೆ ರೈಲ್ವೆ ನೌಕರರ ಹಿತ ಕಾಯುವುದು ಮುಖ್ಯವಾಗಬೇಕೇ ವಿನಃ ನೆಮ್ಮದಿಯ ಜೀವನಕ್ಕೆ ಆತಂಕ ಸೃಷ್ಟಿಸುವ ಕೆಲಸ ಮಾಡಬಾರದು.
ರಾಷ್ಟ್ರೀಯ ಪಿಂಚಣಿ ಪದ್ಧತಿಯಿಂದಾಗುವ ಸಮಸ್ಯೆಗಳ ಬಗ್ಗೆ ಈಗಾಗಲೇ ದೇಶಾದ್ಯಂತ ಚರ್ಚೆಗಳು ನಡೆದಿದ್ದು, ಕೇಂದ್ರದ ನಿಲುವು ಅತ್ಯಂತ ಅವೈಜ್ಞಾನಿಕ ಹಾಗೂ ಜನವಿರೋಧಿ ನಿಲುವು ಎಂದು ಹೇಳಲಾಗಿದೆ. ಇಷ್ಟಾಗಿಯೂ ಕೇಂದ್ರ ಸರ್ಕಾರ ರಾಷ್ಟ್ರೀಯ ಪಿಂಚಣಿ ಯೋಜನೆ ಹೆಸರಿನಲ್ಲಿ ಹೊಸ ಪಿಂಚಣಿ ಯೋಜನೆ ಜಾರಿಗೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಕಾರ್ಯದರ್ಶಿ ಪಿ.ಎಂ. ಪ್ರವೀಣ್ ಕುಮಾರ್ ಹಾಗೂ ಅಧ್ಯಕ್ಷ ಶ್ರೀರಾಮುಲು ನಾಯಕ್ ಅವರು ಕೇಂದ್ರ ಸರ್ಕಾರದ ನೂತನ ಪಿಂಚಣಿ ಯೋಜನೆಯಿಂದಾಗುವ ಅಪಾಯಗಳು ಹಾಗೂ ನೌಕರರ ಹಿತಾಸಕ್ತಿಗೆ ಕೇಂದ್ರ ಜಾರಿಗೊಳಿಸುತ್ತಿರುವ ಮಾರಕ ನಿಲುವುಗಳು ಕುರಿತು ತಿಳಿಸಿದರಲ್ಲದೆ, ಕೇಂದ್ರ ಸರ್ಕಾರ ನೌಕರರ ಹಿತ ಕಾಯದ ಎನ್‌ಪಿಎಸ್ ರದ್ದುಗೊಳಿಸಬೇಕು. ಈ ಹಿಂದಿನಂತೆಯೇ ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಉಪಾಧ್ಯಕ್ಷ ಎಂ. ವಿಜಯಕುಮಾರ್, ಬಸಪ್ಪ, ಉಮೇಶ್, ಸಹ ಕಾರ್ಯದರ್ಶಿ ಬಿ. ದೇವಿ, ನವೀನ್ , ಕೊಂಡಯ್ಯ ಸೇರಿದಂತೆ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜ. 11ರ ವರೆಗೆ ಪ್ರತಿಭಟನೆ ಮುಂದುವರಿಯಲಿದೆ.