ಪ್ರತಿ ೨ ವರ್ಷಕ್ಕೊಮ್ಮೆ ಒಕ್ಕೂಟದ ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕಿದೆ. ಆದರೆ, ಇಲ್ಲಿನ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಅಧಿಕಾರಿಗಳು ಆ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೋಟ್ಯಂತರ ರು. ವಾಪಸ್‌ ಹೋಗುತ್ತಿದೆ. ಜೊತೆಗೆ ಪೋಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸೇವೆಯಲ್ಲಿ ಕಿರುಕುಳ, ಅನಗತ್ಯವಾಗಿ ಕೆಲಸದಿಂದ ತೆಗೆದುಹಾಕುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಅ.೨ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಗ್ರಾಪಂ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ತಿಳಿಸಿದರು.

ಕೌಶಲ್ಯಾಭಿವೃದ್ದಿ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಜೋಜನೆಯಡಿ ಶೇ. ೬೦ ಮತ್ತು ೪೦ರ ಅನುದಾನದಲ್ಲಿ ಯೋಜನೆಯಡಿ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಗೋಸ್ಕರ ಒಕ್ಕೂಟದ ಸಿಬ್ಬಂದಿ ಎಂಬಿಕೆ, ಎಲ್‌ಸಿಆರ್‌ಪಿ, ಕೆಎಸ್., ಪಿಎಸ್ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿ ನಲ್‌ಜಲ್ ಮಿತ್ರ ಹೀಗೆ ಹಲವಾರು ಹುದ್ದೆಗಳನ್ನು ಸೃಷ್ಟಿ ಮಾಡಿ ದುಡಿಸಿಕೊಳ್ಳುತ್ತಾ ಬಿಡಿಗಾಸನ್ನೂ ಗೌರವಧನವನ್ನಾಗಿ ನೀಡುತ್ತಾ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಸಾವಿರಾರು ಮಹಿಳೆಯರು ದುಡಿಯುತ್ತಿದ್ದಾರೆ. ಅಂತಹ ಮಹಿಳೆಯರಿಗೆ ಕೆಲ ಒಕ್ಕೂಟದ ಪದಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರತಿ ೨ ವರ್ಷಕ್ಕೊಮ್ಮೆ ಒಕ್ಕೂಟದ ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕಿದೆ. ಆದರೆ, ಇಲ್ಲಿನ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಅಧಿಕಾರಿಗಳು ಆ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೋಟ್ಯಂತರ ರು. ವಾಪಸ್‌ ಹೋಗುತ್ತಿದೆ. ಜೊತೆಗೆ ಪೋಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆಯೂ ಜಿಪಂ ಸಿಇಒರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ನಾವು ಪ್ರತಿಭಟನೆಯ ಎಚ್ಚರಿಕೆ ನೀಡಿದಾಗ ಮಾತ್ರ ಅವರು ತಾಪಂ ಇಒಗೆ ಪತ್ರ ವ್ಯವಹಾರ ಮಾಡುತ್ತಾರೆಯೇ ಹೊರತು ಮುಂದೆ ಯಾವುದೇ ಕಾರ್ಯಗಳಾಗಿಲ್ಲ. ಇದರಿಂದಾಗಿ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಎಂಬಿಕೆ ಹಾಗೂ ಮದ್ದೂರು ತಾಲೂಕಿನ ವಳಗೆರೆಹಳ್ಳಿಯ ಎಂಬಿಕೆಯವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅಲ್ಲಿ ಕನಿಷ್ಠ ಪಿಯುಸಿ ವ್ಯಾಸಂಗ ಮಾಡಿರಬೇಕೆಂಬ ನಿಯಮವಿದ್ದರೂ ಶಾಸಕರ ಬೆಂಬಲಿಗರು ತಮಗಿಷ್ಟ ಬಂದಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಹಲವಾರು ಯೋಜನೆಗಳಿವೆ. ಅವುಗಳನ್ನೆಲ್ಲಾ ಮುಚ್ಚಿಟ್ಟು ಅಧಿಕಾರಿಗಳು ವಂಚಿಸುತ್ತಿದ್ದಾರೆ. ಒಕ್ಕೂಟದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗಳು, ಶೋಷಣೆಗಳು ಏಕಾಏಕಿ ಕೆಲಸದಿಂದ ತೆಗೆಯುವಂತಹ ಘಟನೆಗಳು ಮರುಕಳಿಸುತ್ತಿವೆ. ಇದೇ ರೀತಿ ಮುಂದುವರಿದಲ್ಲಿ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ, ಸರ್ಕಾರದ ಕಣ್ಣು ತೆರೆಸುವ ಉದ್ದೇಶದಿಂದ ಅ. ೨ರಂದು ಬೆಂಗಳೂರಿನಲ್ಲಿ ಸಹಸ್ರಾರು ಮಂದಿ ಮಹಿಳಾ ಸಿಬ್ಬಂದಿಯೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಜಿಲ್ಲಾಧ್ಯಕ್ಷೆ ನಿವಿತಾ, ಮುಖಂಡರಾದ ರೂಪ, ಶಶಿಕಲಾ, ಮಮತಾ, ಜೈಸುಧಾ, ಮಮತ, ಸುಧಾ ಅವರು ಗೋಷ್ಠಿಯಲ್ಲಿದ್ದರು.