ಮಳವಳ್ಳಿ ಪುರಸಭೆ ಸಮಾನ್ಯ ಸಭೆ ಮುಂದೂಡಿಕೆ ಖಂಡಿಸಿ ಕೆಲ ಸದಸ್ಯರಿಂದ ಪ್ರತಿಭಟನೆ

| Published : Oct 02 2024, 01:09 AM IST

ಸಾರಾಂಶ

ಆರೋಗ್ಯ ಸಮಸ್ಯೆ ಇದ್ದು ಸಭೆ ಮುಂದೂಡಬೇಕೆಂದು ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಉಪಾಧ್ಯಕ್ಷರನ್ನು ಕರೆಸಿ ಸಭೆ ನಡೆಸಬೇಕೆಂದು ಒತ್ತಾಯಿಸಿದರೇ ಇದಕ್ಕೆ ಮುಖ್ಯಾಧಿಕಾರಿಗಳು ಪ್ರತಿಕ್ರಹಿಸಿ ಅವರ ಮೊಬೈಲ್ ಸ್ವೀಚ್ ಆಫ್ ಆಗಿದೆ ಎಂದು ಹೇಳುತ್ತಾರೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಿರ್ಲಕ್ಷ್ಯದಿಂದ ಸಭೆ ಮುಂದೂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ಅ.1ರಂದು ನಿಗಧಿಯಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಿರುವುದನ್ನು ಖಂಡಿಸಿ ಕೆಲ ಸದಸ್ಯರು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಎಂ.ಎಲ್.ಶಿವಸ್ವಾಮಿ ಮಾತನಾಡಿ, ಪುರಸಭೆ ಸಭಾಂಗಣದಲ್ಲಿ 2ನೇ ಅಧಿಕಾರದ ಅವಧಿಯ ಮೊದಲ ಸಾಮಾನ್ಯ ಸಭೆಯೂ ಮಂಗಳವಾರ ನಿಗದಿಯಾಗಿತ್ತು. ಸಭೆಗೆ ಅಧ್ಯಕ್ಷರು- ಉಪಾಧ್ಯಕ್ಷರು ಹಾಜರಾಗದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳು ಸಭೆಯನ್ನು ಮುಂದೂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಗ್ಯ ಸಮಸ್ಯೆ ಇದ್ದು ಸಭೆ ಮುಂದೂಡಬೇಕೆಂದು ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಉಪಾಧ್ಯಕ್ಷರನ್ನು ಕರೆಸಿ ಸಭೆ ನಡೆಸಬೇಕೆಂದು ಒತ್ತಾಯಿಸಿದರೇ ಇದಕ್ಕೆ ಮುಖ್ಯಾಧಿಕಾರಿಗಳು ಪ್ರತಿಕ್ರಹಿಸಿ ಅವರ ಮೊಬೈಲ್ ಸ್ವೀಚ್ ಆಫ್ ಆಗಿದೆ ಎಂದು ಹೇಳುತ್ತಾರೆ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಿರ್ಲಕ್ಷ್ಯದಿಂದ ಸಭೆ ಮುಂದೂಡಿದ್ದಾರೆ ಎಂದು ದೂರಿದರು.

ಸಭೆಯ 14 ವಿಷಯದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯಬೇಕಿತ್ತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ಸದಸ್ಯರು ಗೈರಾಗಿದ್ದಾರೆ ಎಂದು ಆರೋಪಿಸಿದರು.

ಪಟ್ಟಣದ ಅಭಿವೃದ್ಧಿಗೆ ಮೂರು ಕೋಟಿ ಅನುದಾನ ಬಂದಿದೆ. ಸಭೆಯಲ್ಲಿ ಅನುಮೋದನೆ ಪಡೆಯಬೇಕಿತ್ತು. ಆದರೆ, ಸಭೆ ನಡೆಯದಿರುವುದರಿಂದ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಿದೆ.

ಸಾಮಾನ್ಯ ಸಭೆಗೆ 10 ಸದಸ್ಯರು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಅಧ್ಯಕ್ಷರು ಉಪಾಧ್ಯಕ್ಷರು ಬಂದಿರಲ್ಲಿಲ್ಲ. ಮೂರನೇ ಒಂದು ಭಾಗ ಸದಸ್ಯರು ಹಾಜರಾಗಿದ್ದು, ಸಭೆ ನಡೆಸಬೇಕೆಂದು ಸದಸ್ಯರು ಪಟ್ಟು ಹಿಡಿದರು.

ಅಧ್ಯಕ್ಷ- ಉಪಾಧ್ಯಕ್ಷರು ಸಭೆಗೆ ಗೈರಾಗಿರುವುದಕ್ಕೆ ಸ್ಪಷ್ಟನೆ ಕೊಟ್ಟು ಸಭೆಯನ್ನು ಕೂಡಲೇ ನಡೆಸಬೇಕೆಂದು ಒತ್ತಾಯಿಸಿ ಮುಖ್ಯಾಧಿಕಾರಿ ನಾಗರತ್ನಮ್ಮ ಅವರಿಗೆ ಮನವಿ ಸಲ್ಲಿಸಿದರು. ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳುತ್ತಿರುವುದರಿಂದ ಸಭೆ ಮುಂದೂಡಬೇಕೆಂದು ಅಧ್ಯಕ್ಷತೆ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳು ಸಭೆ ಮುಂದೂಡಿರುವ ಬಗ್ಗೆ ಘೋಷಣೆ ಮಾಡಿದರು.

ಪುರಸಭೆ ಸದಸ್ಯೆ ಸವಿತ ಮಾತನಾಡಿ, ಪಟ್ಟಣವನ್ನು ಅಭಿವೃದ್ಧಿ ಪಡಿಸುತ್ತಾರೆಂಬ ನಿರೀಕ್ಷೆಯಲ್ಲಿ ಮತದಾರರು ನಮ್ಮನ್ನು ಗೆಲ್ಲಿಸಿದ್ದಾರೆ. ಆದರೆ, ಸರಿಯಾಗಿ ಸಭೆ ನಡೆಯದ ಕಾರಣ ಅಭಿವೃದ್ಧಿ ಕುಂಠಿತ ಕಂಡಿದೆ. ಇನ್ನೂ ಕೇವಲ 11 ತಿಂಗಳು ಮಾತ್ರ ಉಳಿದಿದೆ. ಇನ್ನದರೂ ಸರಿಯಾದ ಸಭೆ ನಡೆಸಿ ಅಭಿವೃದ್ಧಿಗೆ ಸಹಕರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ರಾಜಶೇಖರ್, ರಾಜೇಶ್ವರಿ, ಪ್ರಮೀಳ, ಭಾಗ್ಯಮ್ಮ, ಸವಿತ, ಇಂದ್ರಮ್ಮ, ಅತಿಯಾಬೇಗಂ, ಕವಿತ ಇದ್ದರು.