ಸಂಡೂರು: ತಾಲೂಕಿನ ಗಣಿಗಳಿಂದ ಅದಿರು ಖರೀದಿಸುವ ಕಂಪನಿಗಳು ತಮ್ಮ ಕಾರ್ಖಾನೆಗಳಿಗೆ ಅದಿರು ಸಾಗಿಸುವ ಗುತ್ತಿಗೆಯನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು. ಕರ್ನಾಟಕ ಇಂಡಸ್ಟ್ರಿಯಲ್ ಪಾಲಿಸಿ ೨೦೨೫ನ್ನು ಪಾಲಿಸಬೇಕು ಎಂದು ಒತ್ತಾಯಿಸಿ ಸಂಡೂರು ತಾಲೂಕು ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಮುಖಂಡರು ಬುಧವಾರ ತಾಲೂಕಿನಾದ್ಯಂತ ಅದಿರು ಸಾಗಣೆ ಲಾರಿಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ ಅವರಿಗೆ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಜಯಣ್ಣ ನವಲೂಟಿ, ಅದಿರು ಸಾಗಾಣಿಕೆ ದರದಲ್ಲಿ ಜಿಂದಾಲ್ ಕಂಪನಿಯು ನಿಗದಿ ಪಡಿಸಿರುವ ಪ್ರತಿ ಟನ್, ಪ್ರತಿ ಕಿ.ಮೀ.ನಂತೆ ದರ ನಿಗದಿ ಮಾಡಬೇಕು. ತಾಲೂಕಿನ ಗಣಿಗಳಿಗೆ ಅದಿರು ಖರೀದಿಸುವ ಕಂಪನಿಗಳು ಗಣಿ ಬಾಧಿತ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅವರ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಹೊಸ ಇಂಡಸ್ಟ್ರಿಯಲ್ ಪಾಲಿಸಿ ಪ್ರಕಾರ ಸ್ಥಳೀಯ ಅದಿರು ಸಾಗಾಣಿಕೆದಾರರಿಗೆ ಮೊದಲ ಆದ್ಯತೆ ನೀಡಬೇಕು. ಕಾರ್ಖಾನೆಗಳು ನಿಗದಿ ಪಡಿಸಿದ ದರ ಮತ್ತು ಲಾಭಾಂಶದಲ್ಲಿ ಯಾವುದೇ ವ್ಯತ್ಯಾಸ ಅಥವಾ ಸ್ಪರ್ಧೆ ಮಾಡದೆ, ಸಾಗಾಣಿಕೆ ಗುತ್ತಿಗೆ ನೀಡತಕ್ಕದ್ದು ಎಂದರು.

ಕಾರ್ಖಾನೆಯ ಮಾಲೀಕರು ಯಾವುದೇ ಲಾಬಿಗೆ ಮಣಿದು ಕಡಿಮೆ ದರದಲ್ಲಿ ಸಾಗಾಣಿಕೆ ಮಾಡುವವರಿಗೆ ಅವಕಾಶ ಮಾಡಿಕೊಡಬಾರದು. ಕಾರ್ಖಾನೆಯವರು ಸ್ವಂತ ಗಣಿಗಳನ್ನು ಹೊಂದಿದ್ದಲ್ಲಿ ಅದಿರು ಸಾಗಾಣಿಕೆ ಮಾಡಲು ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ. ಈಗಾಗಲೇ ಈ ಬೇಡಿಕೆಗಳ ಕುರಿತು ಕಾರ್ಖಾನೆಗಳವರಿಗೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಖನಿಜ ನಿಗಮದ ಉಪಾಧ್ಯಕ್ಷ ಎಚ್.ಲಕ್ಷ್ಮಣ, ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ನಿಕ್ಕಂ, ಸಂಡೂರು ಘಟಕದ ಉಪಾಧ್ಯಕ್ಷರಾದ ವಾಮದೇವ ಮದ್ದಾನಿ, ಈಶಣ್ಣ ಉಬ್ಬಲಗಂಡಿ, ತಿಮ್ಮಪ್ಪ ತಾರಾನಗರ, ರಾಘವೇಂದ್ರ ನಾಯಕ್, ಮುಖಂಡರಾದ ಬಿ.ಜಿ. ಸಿದ್ದನಗೌಡ, ಕಿರಣ್, ಮಲ್ಲಿಕಾರ್ಜುನ ಕಾಳಿಂಗೇರಿ, ಫಕ್ಕೀರಪ್ಪ, ನಾಗರಾಜ್, ಓಬಳೇಶ್, ಆರ್.ಕೆ. ಹೆಗಡೆ, ಮರಿಸ್ವಾಮಿ, ಚಂದ್ರಾನಾಯ್ಕ್, ಜೆಬಿಟಿ ಬಸವರಾಜ್, ರಮೇಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.