ಸಾರಾಂಶ
ಉದ್ಯೋಗಕ್ಕಾಗಿ ನಿತ್ಯ 20,000ಕ್ಕೂ ಹೆಚ್ಚಿನ ಜನರು ಕೆಜಿಎಫ್ ಮತ್ತು ತಾಲೂಕಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಇಷ್ಟು ಜನರಿಗೆ ರೈಲು ಬೋಗಿಗಳ ಸಂಖ್ಯೆ ಕಡಿಮೆ ಇದ್ದರೂ ಸಹಕರಿಸಿಕೊಂಡು ಹೋಗಿ ಬರುತ್ತಿದ್ದರು. ಆದರೆ ಕಳೆದ ವಾರದಿಂದ ಕೆಜಿಎಫ್‌ನಿಂದ ಬೆಂಗಳೂರಿಗೆ ಪಟ್ಟಣ ಮೂಲಕ ಹೋಗುವ ಪ್ಯಾಸೆಂಜರ್ ರೈಲುಗಳ ಬೋಗಿಗಳನ್ನು ಕುಂಭಮೇಳ ಹಿನ್ನೆಲೆಯಲ್ಲಿ ದಿಢೀರನೆ ಕಡಿತಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ದಿಢೀರನೆ ಕೆಜಿಎಫ್‌ನ ಮಾರಿಕುಪ್ಪಂನಿಂದ ಪಟ್ಟಣ ಮೂಲಕ ಬೆಂಗಳೂರಿಗೆ ಹೋಗುವ ಮಾರಿಕುಪ್ಪಂ ಪ್ಯಾಸೆಂಜರ್ ರೈಲಿನ ಬೋಗಿಗಳನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ನೂರಾರು ಪ್ರಯಾಣಿಕರು ಬುಧವಾರ ರೈಲು ತಡೆದು ಪ್ರತಿಭಟಿಸಿದರು.ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಜನರನ್ನು ಕೊಂಡೊಯ್ಯಲು ಕೆಜಿಎಫ್-ಬಂಗಾರಪೇಟೆಯಿಂದ ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್ ರೈಲುಗಳ ಬೋಗಿಗಳನ್ನು ಕಡಿತಗೊಳಿಸಿ ಉತ್ತರಪ್ರದೇಶಕ್ಕೆ ಹೋಗುವ ರೈಲುಗಳಿಗೆ ಅಳವಡಿಸಲಾಗಿರುವುದರಂದಲೇ ಸಮಸ್ಯೆ ಉಂಟಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.ಉದ್ಯೋಗಕ್ಕಾಗಿ ನಿತ್ಯ 20,000ಕ್ಕೂ ಹೆಚ್ಚಿನ ಜನರು ಕೆಜಿಎಫ್ ಮತ್ತು ತಾಲೂಕಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಇಷ್ಟು ಜನರಿಗೆ ರೈಲು ಬೋಗಿಗಳ ಸಂಖ್ಯೆ ಕಡಿಮೆ ಇದ್ದರೂ ಸಹಕರಿಸಿಕೊಂಡು ಹೋಗಿ ಬರುತ್ತಿದ್ದರು. ಆದರೆ ಕಳೆದ ವಾರದಿಂದ ಕೆಜಿಎಫ್‌ನಿಂದ ಬೆಂಗಳೂರಿಗೆ ಪಟ್ಟಣ ಮೂಲಕ ಹೋಗುವ ಪ್ಯಾಸೆಂಜರ್ ರೈಲುಗಳ ಬೋಗಿಗಳನ್ನು ಕುಂಭಮೇಳ ಹಿನ್ನೆಲೆಯಲ್ಲಿ ದಿಢೀರನೆ ಕಡಿತಗೊಳಿಸಲಾಗಿದೆ.
ಇದರಿಂದ ಮೊದಲೇ ರೈಲಿನೊಳಗೆ ಆಸನಗಳ ಕೊರತೆ ನಡುವೆಯೂ ಜೋತಾಡಿಕೊಂಡು ಹೋಗುತ್ತಿದ್ದರು.ಈಗ ಬೋಗಿಗಳ ಕೊರತೆಯಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ ೨೦ಸಾವಿರ ಪ್ರಯಾಣಿಕರಿಗೆ ಪ್ಯಾಸೆಂಜರ್ ರೈಲುಗಳಲ್ಲಿ ಬೋಗಿಗಳನ್ನು ಸಂಖ್ಯೆ ಕಡಿತ ಮಾಡಿರುವುದರಿಂದ ಅವ್ಯವಸ್ಥೆ ನಿರ್ಮಾಣವಾಗಿದೆ.ಬುಧವಾರ ಕೆಜಿಎಫ್‌ನಿಂದ ಬಂದ ಪ್ಯಾಸೆಂಜರ್ ರೈಲಿಗೆ ಬೋಗಿಗಳ ಸಂಖ್ಯೆಗಿಂತಲೂ ಎರಡರಷ್ಟು ಪ್ರಯಾಣಿಕರು ಪಟ್ಟಣದ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದರು. ಕೆಜಿಎಫ್‌ನಿಂದಲೇ ಎಲ್ಲಾ ಬೋಗಿಗಳಲ್ಲಿ ಪ್ರಯಾಣಿಕರು ತುಂಬಿದ್ದರು. ರೈಲು ಪಟ್ಟಣಕ್ಕೆ ಬಂದಾಗ ಬೋಗಿಯೊಳಗೆ ಕಾಲಿಡಲೂ ಆಗದಷ್ಟು ಪ್ರಯಾಣಿಕರು ತುಂಬಿದ್ದರು.ಸುಮಾರು ೪೫ನಿಮಿಷಗಳ ಕಾಲ ರೈಲನ್ನು ತಡೆದು ಘೋಷಣೆಗಳನ್ನು ಕೂಗಿ ಈ ಕೂಡಲೆ ಬೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂದು ಪಟ್ಟುಹಿಡಿದರು. ಬಳಿಕ ಹಿರಿಯ ಅಧಿಕಾರಿಗಳಿಂದ ಹೆಚ್ಚಿಸುವ ಭರವಸೆ ಸಿಕ್ಕ ನಂತರ ಪ್ರತಿಭಟನೆ ಹಿಂಪಡೆದು ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.