ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಎಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟಿರುವ ಹಣವನ್ನು ದುರ್ಬಳಕೆ ಖಂಡಿಸಿ ಬಹುಜನ ಸಮಾಜ ಪಕ್ಷದವರು ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು.ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರನ್ನು ಸಬಲರನ್ನಾಗಿ ಮಾಡಲು ರಾಜ್ಯ ಸರ್ಕಾರ 2013- 14ರಲ್ಲಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆ ರೂಪಿಸಿತು. ಈ ಯೋಜನೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂಬ ಆಶಾಭಾವನೆ ಉಂಟಾಗಿತ್ತು. ಆದರೆ, ರಾಜ್ಯವನ್ನಾಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಅಧಿನಿಯಮದ ಆಶಯಗಳನ್ನು ಜಾರಿಗೊಳಿಸದೆ ಗಾಳಿಗೆ ತೂರಿವೆ ಎಂದು ಅವರು ಕಿಡಿಕಾರಿದರು.
2014-15 ರಿಂದ ಕಳೆದ 10 ವರ್ಷಗಳಲ್ಲಿ 2.94 ಲಕ್ಷ ಕೋಟಿ ರೂ. ಈ ಉದ್ದೇಶಕ್ಕೆ ಮೀಸಲಿಡಲಾಗಿದೆ. ಆದರೆ, ಈ ಪೈಕಿ ಕೇವಲ ಶೇ.10 ರಷ್ಟು ಹಣವನ್ನೂ ಎಸ್ಸಿ, ಎಸ್ಟಿಗಳಿಗೆ ತಲುಪಿಸದೆ ಸರ್ಕಾರಗಳು ಮಹಾ ದ್ರೋಹ ಮಾಡಿವೆ. ಯೋಜನೆ 25398 ಕೋಟಿ ರೂ.ವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ. ಹಿಂದಿನ ಬಿಜೆಪಿ ಸರ್ಕಾರ ಸುಮಾರು 19 ಸಾವಿರ ಕೋಟಿ ರೂ. ಅನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ನಡೆದಿದೆ. ಜೊತೆಗೆ ಸರ್ಕಾರವೇ ಹೇಳಿರುವಂತೆ ಬಿಜೆಪಿ ಆಡಳಿತದಲ್ಲಿ ಭೋವಿ ಅಭಿವೃದ್ಧಿ ನಿಗಮ, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಭವ ಅಭಿವೃದ್ಧಿ ನಿಗಮಗಳಲ್ಲಿ ಅವ್ಯವಹಾರ ನಡೆದಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಇದೂವರೆಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರ 70 ಸಾವಿರ ಕೋಟಿ ರೂ. ದುರ್ಬಳಕೆ ಮಾಡಿಕೊಂಡಿವೆ ಎಂದು ಅವರು ಆರೋಪಿಸಿದರು.
ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯಲ್ಲಿ ರೂಪಿಸಿರುವ ಯೋಜನೆಗಳು ನೇರವಾಗಿ ಎಸ್ಸಿ, ಎಸ್ಟಿಗಳಿಗೆ ತಲುಪುವಂತೆ ಮಾಡಬೇಕು. ಈ ಮೀಸಲು ಹಣವನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿರುವವರನ್ನು ಶಿಕ್ಷೆಗೆ ಗುರಿ ಪಡಿಸಬೇಕು. ಈಗಾಗಲೇ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಖಾತೆಗೆ ಹಿಂತಿರುಗಿಸಲು ಆದೇಶಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಬಿಎಸ್ಪಿ ನಗರಾಧ್ಯಕ್ಷ ಸಿ. ಶ್ರೀನಿವಾಸಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಭರತ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸುನಿಲ್ ಕುಮಾರ್, ಖಜಾಂಚಿ ಬಿ. ಮಹದೇವಸ್ವಾಮಿ, ಜಿಲ್ಲಾ ಉಸ್ತುವಾರಿ ಪಿ. ಚಂದ್ರಶೇಖರ್, ಸಂಯೋಜಕ ದಂಡಿಕೆರೆ ಬಸವಣ್ಣ ಮೊದಲಾದಲರು ಇದ್ದರು.