ಗೋಮಾಳದ ರಕ್ಷಣೆ ಮಾಡುವಂತೆ ಹೊಳೆನರಸೀಪುರದ ಹೊನ್ನಾವರ ಗ್ರಾಮಸ್ಥರ ಪ್ರತಿಭಟನೆ

| Published : Mar 24 2024, 01:32 AM IST

ಗೋಮಾಳದ ರಕ್ಷಣೆ ಮಾಡುವಂತೆ ಹೊಳೆನರಸೀಪುರದ ಹೊನ್ನಾವರ ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರದ ಹೊನ್ನಾವರ ಗ್ರಾಮದಲ್ಲಿ ಇರುವ ೫ ಎಕರೆ ಗೋಮಾಳ ಜಾಗದಲ್ಲಿ ಅತಿಕ್ರಮಿಸಿ, ಶೆಡ್ ನಿರ್ಮಿಸಿರುವುದನ್ನು ವಿರೋಧಿಸುವ ಜತೆಗೆ ೫ ಎಕರೆ ಗೋಮಾಳವನ್ನು ಗ್ರಾಮಕ್ಕೆ ಉಳಿಸಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಆಡಳಿತದ ವಿರುದ್ದ ಪ್ರತಿಭಟನೆ ನಡೆಸಿದರು.

5 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಶೆಡ್‌ ನಿರ್ಮಾಣ । ಗ್ರಾಮಕ್ಕೆ ಗೋಮಾಳ ಉಳಿಸುವಂತೆ ಆಗ್ರಹ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಹೊನ್ನಾವರ ಗ್ರಾಮದಲ್ಲಿ ಇರುವ ೫ ಎಕರೆ ಗೋಮಾಳ ಜಾಗದಲ್ಲಿ ಅತಿಕ್ರಮಿಸಿ, ಶೆಡ್ ನಿರ್ಮಿಸಿರುವುದನ್ನು ವಿರೋಧಿಸುವ ಜತೆಗೆ ೫ ಎಕರೆ ಗೋಮಾಳವನ್ನು ಗ್ರಾಮಕ್ಕೆ ಉಳಿಸಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಆಡಳಿತದ ವಿರುದ್ದ ಪ್ರತಿಭಟನೆ ನಡೆಸಿದರು.

ಒಂದೇ ಕುಟುಂಬದ ಕೆಲವರು ಗ್ರಾಮದ ಗೋಮಾಳದಲ್ಲಿ ಬಂಗಲೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇವರು ವಿದ್ಯಾವಂತರು ಹಾಗೂ ನಾನಾ ಹುದ್ದೆಯಲ್ಲಿದ್ದಾರೆ. ಹೊನ್ನಾವರ ಗ್ರಾಮದಲ್ಲಿ ಅವಿದ್ಯಾವಂತರು ಹೆಚ್ಚಿರುವ ಕಾರಣದಿಂದ ಗೋಮಾಳ ಒತ್ತುವರಿ ಸಂದರ್ಭದಲ್ಲಿ ಧ್ವನಿಗೂಡಿಸಲಾಗಿರಲಿಲ್ಲ. ಇತ್ತೀಚೆಗೆ ಒತ್ತುವರಿಯಾಗಿದ್ದ ಅದೇ ಸರ್ವೆ ನಂ.೯೧ ರ ಗೋಮಾಳದ ಉಳಿಕೆ ಜಾಗದಲ್ಲಿ ಕನಕ ಭವನ, ಬಸವ ಭವನ ಎಂದು ನಿರ್ಮಿಸಿಕೊಳ್ಳಲು ಉದ್ದೇಶಿಸಲಾಗಿತ್ತು. ಸರ್ಕಾರ ಇದಕ್ಕೆ ಸಮ್ಮತಿ ನೀಡಿತ್ತು. ಆದರೆ ಒತ್ತುವರಿದಾರರು ಭವನಗಳನ್ನು ನಿರ್ಮಿಸಲು ಉದ್ದೇಶಿಸಿದ್ದ ಸ್ಥಳದಲ್ಲಿಯೇ ರಾತ್ರೋ ರಾತ್ರಿ ಹಸು ಸಾಕಾಣಿಕೆ ಶೆಡ್ ನಿರ್ಮಿಸಿದ್ದಾರೆ. ಕೇಳಲು ಹೋದ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಎಲ್ಲಿಯಾದರೂ ಹೋಗಿ ದೂರು ಕೊಡಿ ಎಂದು ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ದೂರು ನೀಡಲು ಹೋದರೆ ತಹಸೀಲ್ದಾರ್, ಇಒ ಅವರಿಗೆ ದೂರು ನೀಡಿ ಸರ್ವೆಗೆ ಬಂದಾಗ ರಕ್ಷಣೆಗೆ ನಿಲ್ಲುತ್ತೇವೆ ಎಂದಿದ್ದಾರೆ. ನಮ್ಮ ದೂರನ್ನಾಧರಿಸಿ ರಾಜಸ್ವ ನಿರೀಕ್ಷಕರು, ಸಿಬ್ಬಂದಿಯೊಂದಿಗೆ ಸರ್ವೆ ಮಾಡಲು ಬಂದಾಗ ಸ್ಪಂದಿಸದೇ ಅವರೂ ಸಹ ಹಿಂತಿರುಗಿ ಹೋಗುವಂತೆ ಮಾಡಿದರು. ನ್ಯಾಯ ಸಿಗುವವರೆಗೂ ಈ ಜಾಗದಲ್ಲೇ ಧರಣಿ ಕೂರುತ್ತೇವೆ ಎಂದು ಪ್ರತಿಭಟನೆಕಾರರು ತಿಳಿಸಿದರು.

ಗೋಮಾಳ ಜಾಗ ೨೦೧೯, ೨೦೨೦ರಲ್ಲಿ ಗ್ರಾಮದ ವಸತಿ ರಹಿತರಿಗೆ ಜನತಾ ಮನೆ ನಿರ್ಮಿಸಿಕೊಳ್ಳಲು ಸುಮಾರು ೨ ಎಕರೆಯಷ್ಟು ವಿತರಿಸಲಾಗಿತ್ತು. ಆ ನಂತರದಲ್ಲಿ ಇವರಿಗೆ ಹೆದರಿಸಿ ಜಾಗ ಬೇರೆಡೆ ಎಂದು ದಿಕ್ಕು ತಪ್ಪಿಸಿದ್ದಾರೆ. ವಿತರಣೆಯಾಗಿದ್ದ ನಿವೇಶನದಲ್ಲಿ ವಕೀಲ ಪ್ಮಟ್ಟರಾಜ್, ಸಹೋದರರಾದ ತುಮಕೂರಿನ ಪಿಡಿಒ ನಿಂಗರಾಜ್, ಲಕ್ಷ್ಮೇಗೌಡ, ಚಂದ್ರಶೇಖರ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಸಣ್ಣೇಗೌಡ ಮನೆ ನಿರ್ಮಿಸಿಕೊಂಡಿದ್ದಾರೆ. ಇವರಿಗೆ ಸಮೀಪದಲ್ಲೇ ೮ ಎಕರೆಯಷ್ಟು ಜಮೀನು ಇದೆ. ಆದರೂ ದುರಾಸೆಯಿಂದ ಗ್ರಾಮದ ಗೋಮಾಳವನ್ನು ಕಬಳಿಸಿ ಮನೆ, ಇತ್ತೀಚೆಗೆ ಶೆಡ್ ನಿರ್ಮಿಸಿಕೊಂಡಿದ್ದಾರೆ. ರಸ್ತೆ ಬದಿಯ ಗೋಮಾಳವಾದ್ದರಿಂದ ಬಸ್ ಪ್ರಯಾಣಿಕರ ತಂಗುದಾಣವನ್ನೂ ಸಹ ಅಕ್ರಮಿಸಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ, ಹಿರಿಯರಾದ ಶಂಕರೇಗೌಡ, ದಯಾನಂದ, ಕುಮಾರ ಹಾಗೂ ಧರಣಿ ನಿರತರು ಆರೋಪಿಸಿದ್ದಾರೆ.

‘ಗ್ರಾಮದಲ್ಲಿ ಇವರ ಅಕ್ರಮಕ್ಕೆ ಎಣೆ ಇಲ್ಲದಂತಾಗಿದೆ. ಬೇಕೆಂತಲೇ ಗೋಮಾಳದಲ್ಲಿ ಇತರೆ ಮನೆಗಳ ಮುಂದೆ ಅವರ ಗೃಹತ್ಯಾಜ್ಯ ಹಾಗೂ ಕೊಟ್ಟಿಗೆ ನೀರು ಹರಿಬಿಟ್ಟು ಮಲಿನಗೊಳಿಸಿದ್ದಾರೆ. ಅವರ ಬಳಿ ಹಣ, ಹುದ್ದೆ ಇರುವ ಕಾರಣ ನ್ಯಾಯ ಕೇಳಲು ಹೋದವರ ಮೇಲೆ ಹುಡುಗರನ್ನು ಬಿಟ್ಟು ಹಲ್ಲೆ ಮಾಡಿಸುತ್ತಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದವರ ಮೇಲೆ ಸುಳ್ಳು ದೂರು ಕೊಡುತ್ತಾರೆ. ನಮ್ಮ ಗ್ರಾಮದಲ್ಲಿ ನಿವಾಸಿಗಳ ಅನುಕೂಲಕ್ಕೆ ಮಹನೀಯರ ಹೆಸರಿನಲ್ಲಿ ಭವನಗಳ ನಿರ್ಮಾಣ ಮಾಡಲು ನಿಗದಿಪಡಿಸಿದ್ದ ಜಾಗಕ್ಕೂ ಶೆಡ್ ಹಾಕಿ ದರ್ಪ ತೋರಿದ್ದಾರೆ’ ಎಂದು ಹೊನ್ನಾವರ ಗ್ರಾಮಸ್ಥರು ಹಾಗೂ ಐಚನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಆರೋಪಿಸಿದ್ದಾರೆ.ಹೊಳೆನರಸೀಪುರದ ಕಸಬಾ ಹೋಬಳಿಯ ಹೊನ್ನಾವರ ಗ್ರಾಮದಲ್ಲಿ ಒತ್ತುವರಿಯಾಗಿರುವ ಗೋಮಾಳವನ್ನು ಬಿಡಿಸಿಕೊಡಲು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.