ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ವತಿಯಿಂದ ಹಕ್ಕುಪತ್ರಕ್ಕಾಗಿ ಮೂಲ್ಕಿ ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗ ಬುಧವಾರ ಅರಂಭಗೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಮುಂದುವರಿದಿದೆ.ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಯುವ ಸಾಧ್ಯತೆಯಿದೆ. ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಧರಣಿ ನಿರತರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆಯ ಪರಿಹಾರದ ಭರವಸೆ ನೀಡಿದರೂ, ಹಕ್ಕುಪತ್ರ ಕೈಗೆ ದೊರಕುವವರೆಗೆ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಧರಣಿನಿರತರು ತಿಳಿಸಿದ್ದಾರೆ.
ಬಳ್ಕುಂಜೆ ಗ್ರಾಮದ ಕೊಲ್ಲೂರುಪದವು ಬಳಿ ಸರ್ವೆ ನಂಬರ್ ೯೨ರಲ್ಲಿ ೭.೦೪ ಎಕರೆ ಜಾಗವನ್ನು ೩೦ ಕೊರಗ ಕುಟುಂಬಗಳಿಗೆ ನೀಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಧರಣಿ ಅರಂಭಿಸಿದ ತಕ್ಷಣ ಐಟಿಡಿಪಿ ಅಧಿಕಾರಿಗಳು ಸರ್ವೇಯರ್ ಹಾಗೂ ಕೊರಗ ಕುಟುಂಬಗಳು ಸೇರಿ ಜಾಗದ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಕೊರಗ ಕುಟುಂಬ ಸದಸ್ಯರು ಜಾಗ ತೀರಾ ಇಳಿಜಾರಿನಿಂದ ಕೂಡಿದ್ದು ವಾಸಯೋಗ್ಯವಲ್ಲ ಎಂದು ತಿರಸ್ಕರಿಸಿ ವಾಪಸಾಗಿದ್ದರು. ಬಳಿಕ ಎಳತ್ತೂರಿನಲ್ಲಿ ಸರ್ವೆ ನಂಬರ್ ೮೭ರಲ್ಲಿ ೭.೪೦ ಸೆಂಟ್ಸ್ ಜಾಗವನ್ನು ತಮಗೆ ನೀಡುವಂತೆ ಮನವಿ ಮಾಡಿದ್ದರು.ಮೊದಲು ಈ ೩೦ ಕೊರಗ ಕುಟುಂಬಗಳಿಗೆ ೨೦೨೨ರಲ್ಲಿ ತಾಳಿಪಾಡಿಯಲ್ಲಿ ೫.೫೩ ಜಾಗ ಮೀಸಲಿರಿಸಿ ತಲಾ ೧೪ ಸೆಂಟ್ಸ್ ಭೂಹಂಚಿಕೆಗೆ ನಿರ್ಧರಿಸಲಾಗಿತ್ತು. ಬಳಿಕ ಡೀಮ್ಡ್ ಫಾರೆಸ್ಟ್ ಆದ ಕಾರಣ ಯೋಜನೆಯನ್ನು ರದ್ದುಪಡಿಸಲಾಗಿತ್ತು. ೨೦೨೪ರಲ್ಲಿ ಕೊಲ್ಲೂರುಪದವು ಜಾಗ ನೀಡಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಏಕಾಏಕಿ ಈ ಜಾಗವನ್ನು ನಿರಾಕರಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಸರ್ಕಾರ ನಿರ್ಧರಿಸಿದಂತೆ ಕೊಲ್ಲೂರುಪದವು ಬಳಿ ಕೊರಗ ಕುಟುಂಬಗಳಿಗೆ ಜಾಗ ನೀಡಲಾಗಿದೆ. ಅಲ್ಲಿ ವಾಸಯೋಗ್ಯವಾಗಿ ಸಮತಟ್ಟುಗೊಳಿಸಿ ಹಕ್ಕುಪತ್ರ ನೀಡಲಾಗುವುದು. ಆದರೆ ಅವರು ಅದನ್ನು ಪಡೆಯಲು ನಿರಾಕರಿಸಿದ್ದು, ಎಳತ್ತೂರು ಬಳಿ ಮತ್ತೊಂದು ಜಾಗ ಗುರುತಿಸಿದ್ದಾರೆ. ಆದರೆ ಅಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ಬೇಕಿದೆ. ಕೊಲ್ಲೂರುಪದವು ಜಾಗವನ್ನು ಶೀಘ್ರದಲ್ಲಿ ನೀಡಬಹುದಾಗಿದೆ. ಈ ಬಗ್ಗೆ ಧರಣಿನಿರತರಿಗೆ ಮನದಟ್ಟು ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಅರಣ್ಯಮೂಲ ಆದಿವಾಸಿ ಬುಡಕಟ್ಟು ಒಕ್ಕೂಟದ ಸಂಜೀವ ಮೂಡುಬಿದಿರೆ ಮಾತನಾಡಿ, ನಾವು ತಿಳಿಸಿದ ಜಾಗದಲ್ಲಿ ಹಕ್ಕುಪತ್ರ ನೀಡಲೇಬೇಕು. ಸರ್ಕಾರ ಮನಸ್ಸು ಮಾಡಿದರೆ ಸಾಧ್ಯವಿದ್ದು ಅಲ್ಲಿವರೆಗೆ ನಮ್ಮ ಧರಣಿ ಮುಂದುವರಿಯಲಿದೆ. ಹಿಂದೆ ತಾಳಿಪಾಡಿಯಲ್ಲಿ ಗುರುತಿಸಿದ ಜಾಗವನ್ನಾದರೂ ನೀಡಲಿ ಎಂದರು.ಸಮುದಾಯದ ರಾಜ್ಯ ಸಂಯೋಜಕ ಕೆ. ಪುತ್ರನ್, ಸುಂದರ ಗುತ್ತಕಾಡು, ಸುಶೀಲ, ದಿವಾಕರ್ ಮತ್ತಿತರರು ನೆತೃತ್ವದಲ್ಲಿ ಧರಣಿ ನಡೆಯುತ್ತಿದೆ. ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಟೆಂಟ್ ಹಾಕಿ ಅಲ್ಲೇ ಅಡುಗೆ ಮಾಡಿಕೊಂಡು, ಡೋಲು, ತಮಟೆ, ಜನಪದ ಹಾಡು, ಘೋಷಣೆಗಳ ಮೂಲಕ ಧರಣಿ ನಡೆಸಲಾಗುತ್ತಿದೆ. ಮೂಲ್ಕಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ.