ಕನ್ನಡಪ್ರಭ ವಾರ್ತೆ ಮಂಡ್ಯ

ಒಣಗುತ್ತಿರುವ ಬೆಳೆಗಳಿಗೆ ತುರ್ತಾಗಿ ನೀರು ಹರಿಸಿ ಬೆಳೆ ರಕ್ಷಣೆ ಮಾಡಿಕೊಳ್ಳಲು ಸರ್ಕಾರ ನೆರವಾಗಬೇಕು, ಅಣೆಕಟ್ಟೆಯಲ್ಲಿ ೯೨ ಅಡಿ ನೀರಿದ್ದರೂ ನಾಲೆಗಳಿಗೆ ನೀರು ಹರಿಸಲು ಮೀನಮೇಷ ಎಣಿಸದೇ ನೀರು ಹರಿಸಬೇಕು ಎಂದು ಜಿಲ್ಲಾಧಿಕಾರಿಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಆಗ್ರಹಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಹೊತ್ತು ಧರಣಿ ನಡೆಸಿದ ಸಮಿತಿಯ ಪದಾಧಿಕಾರಿಗಳು, ರೈತರ ಹಿತ ಕಾಪಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯದೆ ಗುತ್ತಿಗೆದಾರನ ಹಿತ ಕಾಯುವುದಕ್ಕೋಸ್ಕರ ನೀರನ್ನು ಹರಿಸದೆ ಮೊಂಡಾಟ ಪ್ರದರ್ಶಿಸುತ್ತಿದೆ. ಇನ್ನಾದರೂ ನಾಲೆಗಳಿಗೆ ನೀರನ್ನು ಹರಿಸಿ ಬೆಳೆಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.

ಕಳೆದ ಹದಿನೈದು ದಿನಗಳಿಂದ ಬೆಳೆಗಳಿಗೆ ಒಂದು ಕಟ್ಟು ನೀರು ಹರಿಸುವಂತೆ ಜಿಲ್ಲಾದ್ಯಂತ ರೈತರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ರಾಜ್ಯ ಸರ್ಕಾರ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಕೆಆರ್‌ಎಸ್ ಒಳಹರಿವು ಹೆಚ್ಚಿದ್ದು, ನೀರಿನ ಮಟ್ಟ ಏರಿಕೆಯಾಗುತ್ತಿದ್ದರೂ ನೀರು ಹರಿಸದಿರುವುದು ರೈತರನ್ನು ಬೀದಿಪಾಲು ಮಾಡಲು ಹೊರಟಂತಿದೆ. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಆರನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಯಾಗಲು ಬಿಡುವುದಿಲ್ಲ. ರಾಜ್ಯ ಸರ್ಕಾರ ಆ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಆರನೇ ಹಂತದ ಯೋಜನೆ ಕೃಷಿ ಮತ್ತು ರೈತರ ಪಾಲಿಗೆ ಮರಣಶಾಸನವಿದ್ದಂತೆ ಎಂದು ಕಿಡಿಕಾರಿದರು.

ಸಮಿತಿಯ ಅಧ್ಯಕ್ಷ ಜಿ.ಬಿ.ಶಿವಕುಮಾರ್, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ, ಎಂ.ವಿ.ಕೃಷ್ಣ, ಕನ್ನಡಸೇನೆ ಮಂಜುನಾಥ್, ಬೋರಲಿಂಗೇಗೌಡ, ಮುದ್ದೇಗೌಡ ಇತರರಿದ್ದರು.


ಬರಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹ:

ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ರೈತರ ಬೆಳೆಗಳು ಒಣಗುತ್ತಿವೆ. ಕೃಷಿ ಕೂಲಿಕಾರರಿಗೆ ಕೂಲಿಯೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಣೆಕಟ್ಟೆಯಿಂದ ನೀರು ಹರಿಸದಿರುವ ಕಾರಣ ರೈತರನ್ನು ರಕ್ಷಿಸಲು ಬರಪೀಡಿತ ಪ್ರದೇಶವೆಂದು ಘೋಷಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷ ಎನ್.ಸುರೇಂದ್ರ, ಅಮಾಸಯ್ಯ ಒತ್ತಾಯಿಸಿದರು.