ಸಾರಾಂಶ
ಹುಮನಾಬಾದ್ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜನಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಡಾ.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್‌ನಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಜನಪರ ಸಂಘಟನೆಗಳ ಒಕ್ಕೂಟ, ವಿವಿಧ ದಲಿತ ಪರ ಸಂಘಟನೆಗಳ ಮಹಾಮಂಡಳ ಸದಸ್ಯರು ಹುಮನಾಬಾದ್ ಬಂದ್ ಕರೆ ನೀಡಿದ ಹಿನ್ನಲೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜನಪರ ಸಂಘಟನೆಗಳ ಒಕ್ಕೂಟ ಹುಮನಾಬಾದ್ ವತಿಯಿಂದ ಬಂದ್ ಕರೆ ಹಿನ್ನಲೆಯಲ್ಲಿ ಹಳೆ ತಹಸೀಲ್ ಕಚೇರಿಯಿಂದ ಛತ್ರಪತಿ ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರದಾರ ಪಟೇಲ್ ವೃತ್ತದ ಮೂಲಕ ಡಾ. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಡಾ.ಅಂಬೇಡ್ಕರ್ ಅವರನ್ನು ಅಪಮಾನಿಸಿದ ಕಾರಣ ತಕ್ಷಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು, ದೇಶ ದ್ರೋಹ, ಜೊತೆಗೆ ಜಾತಿ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬೀದರ್ ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಖಂಡ್ರೆ ಸಚಿವರಾದ ನಂತರ ಜಿಲ್ಲೆಯಲ್ಲಿ ಹಾಗೂ ಸಚಿವರ ಕ್ಷೇತ್ರದಲ್ಲಿಯೇ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ ಸಂಬಂಧ ಈಶ್ವರ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಡಿವೈಎಸ್‌ಪಿ ಶಿವಾನಂದ ಪವಾಡಶಟ್ಟಿ ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಅಂಜುಮ್ ತಬಸುಮ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಮೇಶ ಡಾಕುಳಗಿ, ಗೌತಮ ಚವ್ಹಾಣ್, ಅಂಕುಶ ಗೋಖಲೆ, ಶೇಕ್ ಮಕ್ಸೂದ್, ಶಿವರಾಜ ಚೀನಕೇರೆ, ರವಿಕುಮಾರ ಹೊಸಳ್ಳಿ, ಗಜೇಂದ್ರ ಕನಕಟಕರ್, ಅನೀಲ ದೊಡ್ಡಿ, ಸುಭಾಷ ಆರ್ಯ, ಶ್ರೀಧರ, ಲಕ್ಷ್ಮೀಪುತ್ರ ಮಾಳಗೆ, ಶಿವಪುತ್ರ ಮಾಳಗೆ, ಪ್ರಭುರಾವ್ ತಾಳಮಡಗಿ, ಗೌತಮ ಸಾಗರ, ಮಲ್ಲಿಕಾರ್ಜುನ ಮಹೇಂದ್ರಕರ್ ಸೇರಿ ವಿವಿಧ ಸಂಘಟನೆಯ ಸಹಸ್ರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.