ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

| Published : Oct 14 2025, 01:00 AM IST

ಸಾರಾಂಶ

ಹಲವು ದಶಕಗಳಿಂದ ಸರ್ಕಾರಿ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡಿರುವ ರೈತರಿಗೆ ಹಕ್ಕುಪತ್ರ ನೀಡಲು ನಮ್ಮನ್ನು ಆಳಿರುವ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲದಿರುವುದು ಅವರ ರೈತ ವಿರೋಧಿ ನೀತಿ ತೋರಿಸುತ್ತದೆ. ಹಲವು ತಾಂತ್ರಿಕ ಕಾರಣಗಳ ನೆಪ ಹೇಳಿ ರೈತರಿಗೆ ಭೂಮಿ ನೀಡುವುದನ್ನು ತಪ್ಪಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವೇಳೆ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಕೆಲ ಅಧಿಕಾರಿಗಳು ಹಣದ ಆಸೆಗಾಗಿ ಭೂಗಳ್ಳರಿಗೆ ಅನುಕೂಲವಾಗುವ ರೀತಿ ಜಮೀನು ಪೋಡಿ ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಹಲವು ಭಾಗಗಳು ಸೇರಿದಂತೆ ಕದಬಳ್ಳಿ ಸೇರಿದಂತೆ ಕೆಲವೆಡೆ ಬಡ ಬಗರ್ ಹುಕುಂ ರೈತರ ಒಕ್ಕಲೆಬ್ಬಿಸಿ ಬಲಾಡ್ಯ ಭೂಗಳ್ಳರಿಗೆ ಅನುಕೂಲ ಮಾಡಿಕೊಡುವ ಪ್ರಕರಣಗಳು ಹಲವೆಡೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಲವು ದಶಕಗಳಿಂದ ಸರ್ಕಾರಿ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡಿರುವ ರೈತರಿಗೆ ಹಕ್ಕುಪತ್ರ ನೀಡಲು ನಮ್ಮನ್ನು ಆಳಿರುವ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲದಿರುವುದು ಅವರ ರೈತ ವಿರೋಧಿ ನೀತಿ ತೋರಿಸುತ್ತದೆ. ಹಲವು ತಾಂತ್ರಿಕ ಕಾರಣಗಳ ನೆಪ ಹೇಳಿ ರೈತರಿಗೆ ಭೂಮಿ ನೀಡುವುದನ್ನು ತಪ್ಪಿಸಲಾಗುತ್ತಿದೆ ಎಂದು ಕಿಡಿಕಾರಿದರು.

ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗಮಿಸಿ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಮುಖಂಡರಾದ ಗುರುಸ್ವಾಮಿ, ಕೆ.ಎನ್.ಮೂರ್ತಿ, ಎನ್.ಮಹದೇವಯ್ಯ, ಚಿಕ್ಕರಾಚಯ್ಯ, ಷಣ್ಮುಖಸ್ವಾಮಿ ಹಾಗೂ ರೈತರು ಪಾಲ್ಗೊಂಡಿದ್ದರು.

ಸಾಹಿತಿ ಡಾ:ಎಸ್.ಎಲ್.ಭೈರಪ್ಪರಿಗೆ ನುಡಿನಮನ ಸಲ್ಲಿಕೆ

ಕೆ.ಆರ್.ಪೇಟೆ:

ಪಟ್ಟಣದ ಬ್ರಾಹ್ಮಣರ ರಾಮಮಂದಿರದಲ್ಲಿ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪರಿಗೆ ನುಡಿನಮನ ಸಲ್ಲಿಸಲಾಯಿತು.

ಸಾಹಿತಿ ಎಂ.ಎಸ್.ಸೋಮಶೇಖರ್ ಮಾತನಾಡಿ, ಎಸ್.ಎಲ್.ಭೈರಪ್ಪ ವಿರಚಿತ ಕಾದಂಬರಿಗಳು ವ್ಯಕ್ತಿಯ ಮಾನಸಿಕ ಸಂದಿಗ್ದತೆ ಮತ್ತು ಭಾರತೀಯ ಪರಂಪರೆಯ ಮೆರುಗನ್ನು ಅನಾವರಣ ಮಾಡಿದ್ದು, ಮನೆ-ಮನ ಮುಟ್ಟಿವೆ ಎಂದರು.

ಭೈರಪ್ಪ ಅವರು 25 ಕ್ಕೂ ಅಧಿಕ ಕಾದಂಬರಿ ಮತ್ತು ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. ಅವರ ಕಾದಂಬರಿ ಓದಿದಾಗ ಅದು ಕೃತಕ ಎನ್ನಿಸುವದಿಲ್ಲ. ಇಲ್ಲೆಲ್ಲೋ ನಮ್ಮ ನಡುವೆಯೇ ನಡೆದಿರುವಂತೆ, ನಮ್ಮ ಮನಸ್ಸಿನೊಳಗೆ ಘಟನೆಗಳು ತಾಕಲಾಟ ನಡೆಸಿದಂತೆ ಭಾಸವಾಗುತ್ತದೆ. ಅವರ ಪ್ರತಿ ಕಾದಂಬರಿ ರಚನೆಯಲ್ಲಿಯೂ ಸಂಶೋಧನೆ ನಡೆಸಿ ಚರ್ಚಿಸಿ ಬರೆಯುತಿದ್ದರು ಎಂದರು.

ಜಿಲ್ಲಾ ಬ್ರಾಹ್ಮಣ ಸಭಾ ನಿರ್ದೇಶಕ ಶಂಕರನಾರಾಯಣ ಶಾಸ್ತ್ರಿ, ತಾಲೂಕು ಅಧ್ಯಕ್ಷ ಅರವಿಂದಕಾರಂತ್ ಮಾತನಾಡಿದರು. ಲೇಖಕ ಬಲ್ಲೇನಹಳ್ಳಿ ಮಂಜುನಾಥ್ ಭೈರಪ್ಪ ಬದುಕು ಬರಹದ ಬಗ್ಗೆ ಪರಿಚಯ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಘುರಾಮ್ ನಾಡಿಗ್, ಕಾರ್ಯದರ್ಶಿಗಳಾದ ಕುಪ್ಪಳ್ಳಿ ಸುಬ್ರಹ್ಮಣ್ಯ, ಸುಬ್ಬುನರಸಿಂಹ, ರಾಮಮಂದಿರದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಸೇರಿದಂತೆ ಹಲವು ಗಣ್ಯರು, ಅಭಿಮಾನಿಗಳು ಭಾಗವಹಿಸಿದ್ದರು.