ಬಾರ್ ಮುಚ್ಚುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

| Published : Oct 20 2024, 02:02 AM IST

ಬಾರ್ ಮುಚ್ಚುವಂತೆ ಗ್ರಾಮಸ್ಥರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಿಗೇನಹಳ್ಳಿ ಮುಖ್ಯ ರಸ್ತೆಯ ಜನವಸತಿ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ‘ಅಕ್ಷಿತಾ ವೈನ್ಸ್’ ಬಾರ್ ತೆರೆಯಲಾಗಿದ್ದು, ಕೂಡಲೇ ಅಬಕಾರಿ ಇಲಾಖೆ ಬಾರ್ ಮುಚ್ಚಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಬಾರ್ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬ್ಯಾಟರಾಯನಪುರ

ಕ್ಷೇತ್ರದ ಕಟ್ಟಿಗೇನಹಳ್ಳಿ ಮುಖ್ಯ ರಸ್ತೆಯ ಜನವಸತಿ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ‘ಅಕ್ಷಿತಾ ವೈನ್ಸ್’ ಬಾರ್ ತೆರೆಯಲಾಗಿದ್ದು, ಇದರಿಂದ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ, ಕೂಡಲೇ ಅಬಕಾರಿ ಇಲಾಖೆ ಬಾರ್ ಮುಚ್ಚಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಬಾರ್ ಮುಂದೆ ಪ್ರತಿಭಟನೆ ನಡೆಸಿದರು.

ಬಾರ್‌ನ ಕೂಗಳತೆ ದೂರದಲ್ಲೇ ಉದ್ಯಾನವನ, ಶಾಲೆ ಮತ್ತು ದೇವಾಲಯಗಳಿವೆ. ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಮತ್ತು ದೇವಾಲಯಕ್ಕೆ ತೆರಳುವ ಹಲವರಿಗೆ ಬಾರ್‌ನಲ್ಲಿ ಕುಡಿದು ತೂರಾಡುವ ಕುಡುಕರಿಂದ ತೊಂದರೆ ಆಗುತ್ತಿದೆ. ಮಕ್ಕಳು ಮಾರ್ಗ ಬದಲಿಸಿ ಶಾಲೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಬಾರ್ ಮುಂದೆ ಇರುವ ತರಕಾರಿ ಮತ್ತು ಕಿರಾಣಿ ಅಂಗಡಿಗಳ ಗ್ರಾಹಕರಿಗೂ ಬಾರ್‌ನಿಂದ ಸಮಸ್ಯೆಯಾಗುತ್ತಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಬಾರ್ ಮುಚ್ಚಿಸುವ ಮೂಲಕ ನಾಗರಿಕರಿಗೆ ಸ್ಪಂದಿಸಬೇಕಿದೆ, ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಬಾರ್ ಮುಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಕೃಷ್ಣಬೈರೇಗೌಡ ಅವರು ಗ್ರಾಮದ ಹಿತರಕ್ಷಣೆಯನ್ನು ಮನಗಂಡು ಕೂಡಲೇ ಬಾರ್ ಮುಚ್ಚಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಕೆ.ಎ.ಅನಿಲ್ ಕುಮಾರ್, ವೆಂಕಟೇಶಪ್ಪ, ಲಕ್ಷ್ಮಣಪ್ಪ, ಮುನಿಆಂಜಿನಪ್ಪ, ಶಾಂತರಾಜು, ಅಂಬರೀಶ್, ರಾಜಣ್ಣ, ರಮೇಶ್, ಮಂಜುನಾಥ್, ಆನಂದ್, ದೀಪು, ವೀರಭದ್ರಪ್ಪ, ಅಶ್ವಥ್, ಅರುಣ್ ಕುಮಾರ್, ಕೃಷ್ಣಪ್ಪ, ರಾಜಣ್ಣ, ಮುನಿರಾಜು, ವಿಜಯ್, ಬಾಲರಾಜ್, ಮುನೇಗೌಡ, ಸಿದ್ದೇಶ್ ಇದ್ದರು.