ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಹಿಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಈರುಳ್ಳಿ ಮತ್ತು ಟೋಮ್ಯಾಟೋ ಬೆಳೆ ಇಳುವರಿ ಹೆಚ್ಚಿಗೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತ ಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೋಮ್ಯಾಟೋ ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡಿದರು.ತಾಲೂಕಿನ ಉತ್ತಂಗಿ ಗ್ರಾಮದ ರೆವರೆಂಡ್ ಉತ್ತಂಡಿ ಚೆನ್ನಪ್ಪ ವೃತ್ತದಲ್ಲಿ ನೂರಾರು ರೈತರು ಹಾಗೂ ಬೆಳೆಗಾರರು ತಾವು ಬೆಳೆದ ಈರುಳ್ಳಿ ಮತ್ತು ಟೊಮ್ಯಾಟೋ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ, ರಾಜ್ಯದ ವಿಜಯನಗರ, ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ಗದಗ, ಹಾವೇರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದಾರೆ. ನಿರೀಕ್ಷೆಗಿಂತ ಅಧಿಕ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈ ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿಗೆ ₹1000ದಿಂದ ₹1200ವರೆಗೆ ಬೆಲೆ ಇದೆ. ಇದರಿಂದ ರೈತರು ಸಾಕಷ್ಟು ಬಂಡವಾಳ ಹಾಕಿದ್ದಾರೆ. ದರ ಕುಸಿತದಿಂದ ಪ್ರತಿ ವರ್ಷವು ಕೂಡ ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದ ಸಿಎಂ ಸಿದ್ದರಾಮಯ್ಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ವಿಂಟಲ್‌ಗೆ ₹4 ಸಾವಿರ ಬೆಲೆಯಂತೆ ಈರುಳ್ಳಿ ಖರೀದಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಜತೆಗೆ ಈರುಳ್ಳಿ ಸಂಗ್ರಹಣ ಘಟಕ, ರೈತರಿಗೆ ರಿಯಾಯ್ತಿ ದರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈರುಳ್ಳಿ ಬೆಳೆಗಾರರ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಮೋದ್ ತಗ್ಗಿ ಮಾತನಾಡಿ, ಈರುಳ್ಳಿ ದರ ಮಾರುಕಟ್ಟೆಯಲ್ಲಿ ಕುಸಿತ ಕಂಡಾಗ ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಎಫ್‌ಐಡಿ ಸಂಸ್ಥೆಯನ್ನು ತಾಲೂಕು ಕೇಂದ್ರದಲ್ಲಿ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ಅನೇಕ ಕಡೆಗಳಲ್ಲಿ ರೈತರು ಟೊಮ್ಯಾಟೋ ಬೆಳೆದಿದ್ದಾರೆ. ₹1 ಗಳಿಗೆ ಕೆಜಿಯಂತೆ ಕೇಳೋರಿಲ್ಲದೇ, ರೈತರು ಮಾಡಿರುವ ಸಾಲಕ್ಕೆ ದಿಕ್ಕು ಕಾಣದಂತಾಗಿದ್ದಾರೆ. ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ತಹಸೀಲ್ದಾರ್ ಜಿ.ಸಂತೋಷಕುಮಾರಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಮೂಲಿಮನಿ ಶರಣಪ್ಪ, ಯಾತದ ಪ್ರಭು, ಅಂಗಡಿ ನಾಗರಾಜ, ಮುದೇಗೌಡರ್ ಬಸವರಾಜ, ಕೊಪ್ಪಳ ಜಿಲ್ಲಾಧ್ಯಕ್ಷ ಮಂಜುನಾಥ ಹ್ಯಾಟಿ, ವಿಜಯನಗರ ಜಿಲ್ಲಾಧ್ಯಕ್ಷ ಕೆ.ಮಂಜುನಾಥ, ಎಸ್.ಎಂ. ಪಕ್ಕೀರಯ್ಯ ಸೇರಿ ನೂರಾರು ರೈತರಿದ್ದರು.