ವೈಜ್ಞಾನಿಕವಾಗಿ ಕನಿಷ್ಠ ವೇತನ ಜಾರಿ ಹಾಗೂ ಕಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಮುಂಭಾಗ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳಿಂದ ಶನಿವಾರ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವೈಜ್ಞಾನಿಕವಾಗಿ ಕನಿಷ್ಠ ವೇತನ ಜಾರಿ ಹಾಗೂ ಕಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಮುಂಭಾಗ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳಿಂದ ಶನಿವಾರ ಪ್ರತಿಭಟನೆ ನಡೆಯಿತು.ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ೪ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದು, ಅದರ ಜಾರಿಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾಗಿ ರಾಜ್ಯದ ತಿದ್ದುಪಡಿಗಳನ್ನು ಮಾಡಿದ ನಂತರವೇ ನಿಯಮಾವಳಿಗಳನ್ನು ರೂಪಿಸಿ ಜಾರಿಗೆ ತರಬೇಕು. ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿ ಖಾಯಂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಸಿಐಟಿಯು ಸಂಘಟನೆಯ ಸಂಚಾಲಕ ಪಿ.ಆರ್. ಭರತ್ ಮಾತನಾಡಿ, ೨೦೨೫ರ ಏಪ್ರಿಲ್‌ನಲ್ಲಿ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಲಾಗಿದ್ದರೂ ಇಲ್ಲಿಯವರೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ರಾಜ್ಯದಲ್ಲಿನ ಕಾರ್ಮಿಕರಿಗೆ ನೀಡಬೇಕಾದ ವೈಜ್ಞಾನಿಕ ಕನಿಷ್ಠ ಕೂಲಿಯ ಅಂತಿಮ ಪ್ರಕಟಣೆಯನ್ನು ಮಾಡಿಲ್ಲ. ಇದನ್ನು ಕೂಡಲೇ ಪ್ರಕಟಿಸಬೇಕು. ೨೦೧೭ರ ನಂತರ ೯ ವರ್ಷಗಳಿಂದ ಪುನರ್ವಿಮರ್ಶೆಯಾಗದಿರುವ ಕನಿಷ್ಠ ವೇತನವನ್ನು ಪೂರ್ವಾನ್ವಯವಾಗುವಂತೆ, ತುಟ್ಟಿಭತ್ಯೆಯೊಂದಿಗೆ, ವಲಯ ೩ರಲ್ಲಿನ ಅಕುಶಲ ಕಾರ್ಮಿಕರಿಗೆ ಮಾಸಿಕ ರೂ. ೩೧,೦೦೦ ಕನಿಷ್ಠ ವೇತನ ನಿಗದಿ ಪಡಿಸಬೇಕು. ಪ್ರಕಟಿತ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನ ಪಡೆಯುವ ಸರ್ಕಾರಿ, ಖಾಸಗಿ ವಲಯಗಳಲ್ಲಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನೌಕರರು ಹಾಗೂ ಎಲ್ಲ ಸ್ವರೂಪದ ಬಾಹ್ಯಮೂಲ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಜನಪ್ರತಿನಿಧಿಗಳ ವೇತನ ಹೆಚ್ಚುತ್ತಲೇ ಇರುತ್ತದೆ. ಅದರಂತೆ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಳ ಮಾಡುವಲ್ಲಿ ಸರ್ಕಾರ ಗಮನ ಹರಿಸಬೇಕೆಂದು ಸಂಘಟನೆ ಅಧ್ಯಕ್ಷ ಎ.ಸಿ. ಸಾಬು ಆಗ್ರಹಿಸಿದರು. ಪ್ರತಿಭಟನೆ ಸಂದರ್ಭ ಅಂಗನವಾಡಿ ನೌಕರರ ಸಂಘದ ಇಂದಿರಾ, ಸರ್ಕಾರಿ ಆಸ್ಪತ್ರೆ ನೌಕರರ ಸಂಘದ ಎಚ್.ಕೆ. ಜಾನಕಿ, ಗ್ರಾಪಂ ನೌಕರರ ಸಂಘದ ಎಚ್.ಎಂ. ದಿನೇಶ್, ಬಿಸಿಯೂಟ ನೌಕರರ ಸಂಘದ ಆರ್. ನದಿಯಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.