ಸಾರಾಂಶ
ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯಂ ಶಿಕ್ಷಕೇತರ ನೌಕರರ ಸಂಘದವರು ವಿವಿ ಕುಲಸಚಿವರ ಕಚೇರಿ ಬಾಗಿಲಿಗೆ ನೋಟಿನ ತೋರಣ ಕಟ್ಟಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯಂ ಶಿಕ್ಷಕೇತರ ನೌಕರರ ಸಂಘದವರು ವಿವಿ ಕುಲಸಚಿವರ ಕಚೇರಿ ಬಾಗಿಲಿಗೆ ನೋಟಿನ ತೋರಣ ಕಟ್ಟಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.ಸಿಬ್ಬಂದಿ ವರ್ಗಾವಣೆ, ಪದನಾಮ ಬದಲಾವಣೆ, ಪದೋನ್ನತಿಗೆ ಲಂಚದ ಬೇಡಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೌಕರರು ಮತ್ತು ಕುಲಸಚಿವರ ಕಚೇರಿ ಸಿಬ್ಬಂದಿಯ ನಡುವೆ ಮಾತಿನ ಚಕಮಕಿಯೂ ನಡೆಯಿತು. ಮುಕ್ತ ವಿವಿ ಆಡಳಿತ ಮಂಡಳಿ ಕೈಗೊಂಡಿರುವ ಕೆಲ ಕ್ರಮ, ನಿರ್ಣಯಗಳು ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದು, ಅವುಗಳನ್ನು ರದ್ದುಪಡಿಸಬೇಕು. ಮಂಜೂರಾದ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗಿಂತಲೂ ಹೆಚ್ಚು ತಾತ್ಕಾಲಿಕ ಸಿಬ್ಬಂದಿ ನೇಮಿಸಿಕೊಂಡಿದ್ದು, ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಹಾಲಿ ಇರುವ ತಾಲೂಕು, ಗ್ರಾಮ ಮಟ್ಟದ ಪ್ರಾದೇಶಿಕ ಕೇಂದ್ರಗಳನ್ನು ಕೂಡಲೇ ಮುಚ್ಚಬೇಕು. ಕಳೆದ 5 ವರ್ಷಗಳ ಜಮಾ ಖರ್ಚಿನ ಅಂಕಿ ಅಂಶ ಸಹಿತ ಮಾಹಿತಿ ನೀಡಬೇಕು. ಪಿಂಚಣಿಗೆ ಇಟ್ಟಿರುವ ಠೇವಣಿ ಹಣದ ಮಾಹಿತಿ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.