ಸಾರಾಂಶ
2023-24 ಹಾಗೂ 2025-26ನೇ ಸಾಲಿನಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ನಿರ್ಮಿಸಿಕೊಂಡಿರುವ ದನದ ದೊಡ್ಡಿಗೆ ಈ ವರೆಗೂ ಅನುದಾನ ಮಂಜೂರಾಗಿಲ್ಲ. ಇದನ್ನು ಪ್ರಶ್ನಿಸಿ ಗ್ರಾಪಂ, ತಾಪಂ ಕಚೇರಿಗೆ ಭೇಟಿ ನೀಡಿ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ಕನಕಗಿರಿ:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮೂರು ವರ್ಷಗಳ ಹಿಂದೆ ದನದ ಶೆಡ್ ನಿರ್ಮಿಸಿಕೊಂಡ ಫಲಾನುಭವಿಗಳು ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಿ ತಾಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಜಾನುವಾರು ಕಟ್ಟಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಫಲಾನುಭವಿ ಅಮರೇಶ ವಂಕಲಕುಂಟಿ ಮಾತನಾಡಿ, 2023-24 ಹಾಗೂ 2024-25ನೇ ಸಾಲಿನಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ನಿರ್ಮಿಸಿಕೊಂಡಿರುವ ದನದ ದೊಡ್ಡಿಗೆ ಈ ವರೆಗೂ ಅನುದಾನ ಮಂಜೂರಾಗಿಲ್ಲ. ನಮಗಿಂತ ತಡವಾಗಿ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಬಿಲ್ ಪಾವತಿಯಾಗಿದೆ. ಇದನ್ನು ಪ್ರಶ್ನಿಸಿ ಗ್ರಾಪಂ, ತಾಪಂ ಕಚೇರಿಗೆ ಭೇಟಿ ನೀಡಿ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದೀಗ ಸ್ಥಳಿಯ ಸಿಬ್ಬಂದಿ ಬಿಒಸಿ ವಿಚಾರವಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮುಂದಿನ ತಿಂಗಳು ಗ್ರಾಪಂ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಾಗಲಿದ್ದು, ಅನುದಾನ ನೀಡುವುದು ಅನುಮಾನವಿದೆ. ಈ ಬಗ್ಗೆ ಜಿಪಂ ಸಿಇಒ ಪಂಚಾಯಿತಿಗೆ ಭೇಟಿ ನೀಡಿ ಬಾಕಿ ಇರುವ 22 ಫಲಾನುಭವಿಗಳ ದನದ ದೊಡ್ಡಿಯ ಅನುದಾನ ಪಾವತಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ಕಾರ್ಯದರ್ಶಿ ಶಿವರಾಜ ಪಾಟೀಲ್, ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆಗ ನಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ನಮ್ಮ ಜಾನುವಾರುಗಳನ್ನು ಇಲ್ಲಿಯೇ ಕಟ್ಟಿಕೊಂಡು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಫಲಾನುಭವಿ ದ್ಯಾಮವ್ವ ಕುಂಟೆಪ್ಪ ತಿಳಿಸಿದರು.ಈ ವೇಳೆ ಗ್ಯಾನಪ್ಪ ವರ್ನಖೇಡ, ಹನುಮಂತ ಮುದಗಲ್, ದೇವಪ್ಪ ಜೀರಾಳ, ಯಮನೂರಪ್ಪ ಜೀರಾಳ ಇದ್ದರು.