ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

| Published : Sep 27 2024, 01:21 AM IST

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ನಮ್ಮ ಕುಂದು ಕೊರತೆಗಳು, ಮೂಲ ಸೌಲಭ್ಯಗಳು ಹಾಗೂ ಗ್ರಾಮ ವ್ಯಾಪ್ತಿಗಳಲ್ಲಿ ಗ್ರಾಮ ಸಹಾಯಕರಿಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೆವು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅಗತ್ಯ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಪಟ್ಟಣದ ತಾಲೂಕು ಕಚೇರಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ಕಂದಾಯ ನೌಕರರ ಸಂಘವು ಗ್ರಾಮ ಸಹಾಯಕರ ಸಂಘದ ಬಾಹ್ಯ ಮುಷ್ಕರದಲ್ಲಿ ಭಾಗಿಯಾಗುವ ಮೂಲಕ ಬೆಂಬಲ ನೀಡಿದರು. ತಾಲೂಕು ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಮೌನ ಮುಷ್ಕರದ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಆಗ್ರಹಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕು ಘಟಕದ ಅಧ್ಯಕ್ಷ ಶಿವಪ್ಪ ದಮ್ಮಾಳ್ ಮಾತನಾಡಿ, ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಗ್ರಾಮ ಆಡಳಿತ ಅಧಿಕಾರಿಗಳ ಸಭೆಯಲ್ಲಿ ನಮ್ಮ ಕುಂದು ಕೊರತೆಗಳು, ಮೂಲ ಸೌಲಭ್ಯಗಳು ಹಾಗೂ ಗ್ರಾಮ ವ್ಯಾಪ್ತಿಗಳಲ್ಲಿ ಗ್ರಾಮ ಸಹಾಯಕರಿಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದವು.

ಆದರೆ ಮನವಿಗೆ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ ರಾಜ್ಯ ಸಂಘದ ಅಧ್ಯಕ್ಷರ ಸೂಚನೆಯಂತೆ ತಾಲೂಕು ಹಂತದಲ್ಲಿ ಶಾಂತಿಯುತ ಮುಷ್ಕರ ನಡೆಸುತ್ತಿದ್ದು, ಸರ್ಕಾರದಿಂದ ಸ್ಪಂದನೆ ಸಿಗದಿದ್ದರೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮುಷ್ಕರ ನಡೆಸುತ್ತೇವೆ. ಅಲ್ಲಿಯೂ ನಮ್ಮ ಬೇಡಿಕೆಗಳು ಈಡೇರದಿದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘ, ಕಂದಾಯ ನೌಕರರ ಸಂಘ ಹಾಗೂ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.