ಸಾರಾಂಶ
ರಾಣಿಬೆನ್ನೂರು: ಸೇವಾ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಗುರುವಾರ ನಗರದ ಮಿನಿ ವಿಧಾನಸೌಧದ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಆರ್. ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ರುದ್ರೇಶ ಎಸ್.ಇ. ಮಾತನಾಡಿ, ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಈವರೆಗೂ ಆಗಿರುವ ಎಲ್ಲ ಅಮಾನತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು. ಕೆಸಿಎಸ್‌ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆದೇಶಿಸಬೇಕು. ಅಂತರ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಯ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡಬೇಕು. ಅಂತರ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್ ನಿಯಮ 16ಎ ರ ಉಪಖಂಡ(2)ನ್ನು ಮರುಸ್ಥಾಪಿಸಬೇಕು. ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲ ಬಗೆಯ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ಬಸವಂತಕುಮಾರ, ಕೊಟ್ರಯ್ಯ ಎ.ಎಂ., ಸಂಜೀವರೆಡ್ಡಿ ಬತ್ತೆರ, ಮಂಜುನಾಥ ಎನ್.ಎಂ., ಬಸವರಾಜ ಕಲಾಲ, ಹರೀಶ ಎಂ.ಪಿ., ಅಶೋಕ ಅರಳೇಶ್ವರ, ದೀಪಾ ಎಂ.ಎಸ್., ಶೋಭಾ ಡವಳಗಿ, ವೀಣಾ ಕಲಮ್ಮನವರ, ಶೋಭಾ ಆರೇರ, ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ನಿಂಗಪ್ಪ ಹೊನ್ನಪ್ಪಳ್ಳನವರ, ಎಂ.ಎನ್. ಕೆಂಚರೆಡ್ಡಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ಕಂದಾಯ ಇಲಾಖೆ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿದ್ದರು.