ಸಾರಾಂಶ
ಹಾನಗಲ್ಲ: ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿರುವ ಗ್ರಾಮ ಆಳಿತಾಧಿಕಾರಿಗಳ ಪ್ರತಿಭಟನೆಯನ್ನು ತಾಲೂಕಿನ ರೈತಸಂಘದ ಪದಾಧಿಕಾರಿಗಳು ಬೆಂಬಲಿಸಿ, ತಹಸೀಲ್ದಾರರ ಮೂಲಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕೃಷಿ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲ ಸರ್ಕಾರಿ ಕೆಲಸಗಳಿಗೆ ಜನನದಿಂದ-ಮರಣದವರೆಗೆ ಎಲ್ಲ ದಾಖಲೀಕರಣಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಅವಶ್ಯಕತೆಯಿದೆ. ಕೃಷಿ, ಕಂದಾಯ ದಾಖಲೆಗಳು, ಪ್ರಕೃತಿ ವಿಕೋಪ, ಬೆಳೆಹಾನಿ ಎಲ್ಲ ಸಂದರ್ಭದಲ್ಲಿ ಹಗಲು-ರಾತ್ರಿ ಜನರ ಹತ್ತಿರಕ್ಕೆ ಬರುವವರು ಗ್ರಾಮ ಆಡಳಿತಾಧಿಕಾರಿಗಳು. ಆದರೆ ಸರ್ಕಾರ ಅವರಿಗೆ ಕಾರ್ಯ ನಿರ್ವಹಿಸಲು ಸೂಕ್ತ ಸ್ಥಳಾವಕಾಶ, ಕಟ್ಟಡ, ಪೀಠೋಪಕರಣ, ಮೊಬೈಲ್ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಈ ಸಿಬ್ಬಂದಿಗಳು ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ವಿಳಂಬವಾಗುವ ಸಾಧ್ಯತೆಗಳಿವೆ. ಪ್ರತಿಭಟನೆಯಲ್ಲಿ ತೊಡಗಿರುವ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಕಂದಾಯ ಹಾಗೂ ಭೂ ದಾಖಲೆಗಳನ್ನು ಕಾಯ್ದುಕೊಳ್ಳಲು, ನಿರ್ವಹಿಸಲು ಮತ್ತು ದುರುಪಯೋಗವಾಗದಂತೆ ಕಾಪಾಡಲು ಪ್ರತ್ಯೇಕ ಕಚೇರಿಯ ಅಗತ್ಯವಿದೆ. ಕಂದಾಯ ಇಲಾಖೆಯ ಎಲ್ಲ ದಾಖಲೆಗಳ ದಾಖಲೀಕರಣವಾಗಿರುವುದರಿಂದ ತಂತ್ರಜ್ಞಾನ ಬಳಸಿಕೊಂಡು ತುರ್ತು ಸೇವೆ ಒದಗಿಸಲು ಅಗತ್ಯವಾದ ಲಾಪ್‌ಟಾಪ್, ಮೊಬೈಲ್‌ಗಳ ಅಗತ್ಯವಿದೆ. ತಾಲೂಕಿನಲ್ಲಿ ಇನ್ನಷ್ಟು ಅಧಿಕಾರಿಗಳಿಗೆ ಲಾಪ್‌ಟಾಪ್ ವಿತರಿಸಬೇಕಿದೆ. ಈ ಎಲ್ಲ ಸೌಲಭ್ಯಗಳಿದ್ದಲ್ಲಿ ಅಧಿಕಾರಿಗಳಿಂದ ನಿಗದಿತ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಸರ್ಕಾರ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು. ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆ 6ನೇ ದಿನಕ್ಕೆ ತಲುಪಿದ್ದು, ಪರೀಕ್ಷೆ ಸಮಯದಲ್ಲಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳ ದಾಖಲೆಗಳಿಗೆ ಸಮಸ್ಯೆ ಎದುರಾಗುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳ ಈ ಮುಷ್ಕರವನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಕೂಡಲೇ ಎಲ್ಲ ಬೇಡಿಕೆಗಳನ್ನೂ ಈಡೇರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಕ್ರಮ ವಹಿಸಬೇಕು ಎಂದು ಮರಿಗೌಡ ಪಾಟೀಲ ಒತ್ತಾಯಿಸಿದರು. ಸರ್ಕಾರ ಅನಗತ್ಯ ವಿಳಂಬಧೋರಣೆ ಅನುಸರಿಸಿದರೆ ರಾಜ್ಯಾದ್ಯಂತ ರೈತ ಸಂಘದಿAದ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮರಿಗೌಡ ಎಚ್ಚರಿಸಿದರು. ಈ ಸಂದರ್ಭದಲ್ಲಿ ರೈತಸಂಘದ ಪದಾಧಿಕಾರಿಗಳಾದ ಅಡಿವೆಪ್ಪ ಆಲದಕಟ್ಟಿ, ಸೋಮಣ್ಣ ಜಡೆಗೊಂಡರ, ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ರಾಜೀವ ದಾನಪ್ಪನವರ, ಷಣ್ಮುಖ ಅಂದಲಗಿ, ಶ್ರೀಕಾಂತ ದುಂಡಣ್ಣನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಉಮೇಶ ಮೂಡಿ, ಶಿವಕುಮಾರ ಹಣ್ಣಿ, ಮುತ್ತಪ್ಪ ನೆಗಳೂರ, ನಾಗರಾಜ ಹಿತ್ತಲವರ, ಶಿವಪ್ಪ ಅಗಡಿ, ಲೋಕೇಶ ಹುಲಿ, ಶಂಬುಗೌಡ ಪಾಟೀಲ, ಮಂಜುನಾಥ ಕಬ್ಬೂರ, ಚನ್ನಬಸವ ಸಂಗೂರ, ಈಶ್ವರ ಉದೇಗೌಡರ, ರುದ್ರೇಶ ಭಂಗಿ, ಅಬ್ದುಲ್‌ಖಾದರ ಮುಲ್ಲಾ, ಮೂಕಯ್ಯ ಗುರುಲಿಂಗಮ್ಮನವರ, ವಿಜಯೇಂದ್ರ ಮಡಿವಾಳರ, ರಾಘವೇಂದ್ರ ಗುಡ್ಡೇರ, ಅಣ್ಣಪ್ಪ ಸೊಟ್ಟಕ್ಕನವರ ಇತರರು ಉಪಸ್ಥಿತರಿದ್ದರು.